ಕೊಚ್ಚಿ, ಜೂ. 07 (DaijiworldNews/TA): ಮಲಯಾಳಂ ಚಿತ್ರರಂಗದ ಖ್ಯಾತ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಲೀಂ ಕುಮಾರ್ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ. 56 ವರ್ಷದ ನಟ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 10.43ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಲೀಂ ಕುಮಾರ್ ಅವರ ನಿಧನದ ಸುದ್ದಿ ಹೊರಬಿದ್ದ ತಕ್ಷಣ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಲಯಾಳಂ ಚಿತ್ರರಂಗದ ಹಾಸ್ಯ ಮತ್ತು ಭಾವನಾತ್ಮಕ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದ ಅವರು, ದಕ್ಷಿಣ ಭಾರತದ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಮಿಮಿಕ್ರಿ ವೇದಿಕೆಯಿಂದ ರಾಷ್ಟ್ರ ಪ್ರಶಸ್ತಿವರೆಗೆ : 1969ರ ಅಕ್ಟೋಬರ್ 9ರಂದು ಕೇರಳದ ವಡಕ್ಕನ್ ಪರವೂರಿನಲ್ಲಿ ಜನಿಸಿದ ಸಲೀಂ ಕುಮಾರ್, ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಕೊಚ್ಚಿನ್ ಕಲಾಭವನದ ವೇದಿಕೆಗಳಲ್ಲಿ ಜನಪ್ರಿಯತೆ ಗಳಿಸಿದ ಅವರು, ಬಳಿಕ ಸಿನಿಮಾರಂಗ ಪ್ರವೇಶಿಸಿದರು.
1997ರಲ್ಲಿ ಬಿಡುಗಡೆಯಾದ ‘ಇಷ್ಟಮಾನು ನೂರೊಟ್ಟಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಸಲೀಂ ಕುಮಾರ್, 2000ರಲ್ಲಿ ಬಿಡುಗಡೆಯಾದ ‘ತೆಂಕಾಶಿಪಟ್ಟಣಂ’ ಚಿತ್ರದ ಯಶಸ್ಸಿನ ನಂತರ ಮನೆಮಾತಾದರು. ಮೂರು ದಶಕಗಳ ವೃತ್ತಿಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ವಿಶಿಷ್ಟ ಛಾಪು ಮೂಡಿಸಿದರು.
ಹಾಸ್ಯ ನಟನಾಗಿ ಜನಪ್ರಿಯತೆ ಪಡೆದಿದ್ದರೂ, ಗಂಭೀರ ಪಾತ್ರಗಳಲ್ಲಿಯೂ ತಮ್ಮ ಪ್ರತಿಭೆ ಸಾಬೀತುಪಡಿಸಿದ ಸಲೀಂ ಕುಮಾರ್, ‘ಆದಾಮಿಂತೆ ಮಗನ್ ಅಬು’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನೂ ಹಲವು ಬಾರಿ ತಮ್ಮದಾಗಿಸಿಕೊಂಡಿದ್ದರು.
ಸಲೀಂ ಕುಮಾರ್ ಹಲವು ವರ್ಷಗಳಿಂದ ಲಿವರ್ ಸಿರೋಸಿಸ್ ಸೇರಿದಂತೆ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಕಾಯಿಲೆ ಮದ್ಯಪಾನದಿಂದ ಉಂಟಾಗಿಲ್ಲ, ಬದಲಾಗಿ ಆನುವಂಶಿಕ ಕಾರಣಗಳಿಂದ ಬಂದಿದೆ ಎಂದು ಅವರು ಹಲವು ಬಾರಿ ಸ್ಪಷ್ಟಪಡಿಸಿದ್ದರು. ಕೆಲವು ವರ್ಷಗಳ ಹಿಂದೆ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನೂ ಅವರು ಎದುರಿಸಿದ್ದರು. ಇತ್ತೀಚೆಗೆ ನ್ಯುಮೋನಿಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಪಡೆಯುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ನಿಧನರಾದರು ಎಂದು ವರದಿಯಾಗಿದೆ.
ಹಾಸ್ಯ, ಭಾವನೆ ಮತ್ತು ಪಾತ್ರ ವೈವಿಧ್ಯತೆಯ ಮೂಲಕ ಸಿನಿಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದ ಸಲೀಂ ಕುಮಾರ್ ಅವರ ಅಗಲಿಕೆ ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಸಿನಿತಾರೆಯರು ನೆಚ್ಚಿನ ನಟನಿಗೆ ಭಾವಪೂರ್ಣ ನಮನ ಸಲ್ಲಿಸುತ್ತಿದ್ದಾರೆ.