ಬೆಂಗಳೂರು, ಜೂ. 05 (DaijiworldNews/TA): ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಬೆಂಗಳೂರು ಅಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೋರಮಂಗಲದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನನ್ನ ನಿರ್ಧಾರ ಅಚಲ. ಯಾರನ್ನೂ ಭೇಟಿಯಾಗುವುದಿಲ್ಲ, ಯಾರ ಮನವೊಲಿಕೆಗೂ ನಾನು ಬಗ್ಗುವುದಿಲ್ಲ” ಎಂದು ಅವರು ಖಡಕ್ ಸಂದೇಶ ರವಾನಿಸಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ರಾಮಲಿಂಗಾ ರೆಡ್ಡಿ ಅಸಮಾಧಾನದ ವಿಚಾರವನ್ನು ಪಕ್ಷದ ಹಿರಿಯ ನಾಯಕರು ವಿವರಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಹುಲ್ ಗಾಂಧಿ ಗಮನಕ್ಕೆ ವಿಚಾರ ತಂದಿದ್ದು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ, ಈ ಬೆಳವಣಿಗೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. “ಚರ್ಚೆ ಮಾಡಿ ಮನವೊಲಿಸಿ. ಒಪ್ಪದಿದ್ದರೆ ರಾಜೀನಾಮೆ ಅಂಗೀಕರಿಸಿ” ಎಂಬ ಸಂದೇಶವನ್ನು ರಾಹುಲ್ ಗಾಂಧಿ ನೀಡಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.
ಬೆಂಗಳೂರು ಅಭಿವೃದ್ಧಿ ಇಲಾಖೆ ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಖಾತೆಗಳಲ್ಲಿ ಒಂದಾಗಿದೆ. ಈ ಇಲಾಖೆಯ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ , ಬೆಂಗಳೂರು ಜಲಮಂಡಳಿ, ಮೆಟ್ರೋ ರೈಲು ನಿಗಮ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.
ನಗರ ಮೂಲಸೌಕರ್ಯ, ಫ್ಲೈಓವರ್ಗಳು, ಸುರಂಗ ಮಾರ್ಗ (ಟನಲ್ ರಸ್ತೆ) ಯೋಜನೆಗಳು, ರಸ್ತೆ ಅಭಿವೃದ್ಧಿ ಹಾಗೂ ಸಾವಿರಾರು ಕೋಟಿ ರೂಪಾಯಿ ಅನುದಾನಗಳ ನಿರ್ವಹಣೆ ಈ ಇಲಾಖೆಯಡಿ ನಡೆಯುತ್ತದೆ. ಇದೇ ಕಾರಣಕ್ಕೆ ಈ ಖಾತೆ ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿದೆ.
ರಾಮಲಿಂಗಾ ರೆಡ್ಡಿ ವಾದವೇನು? : ಬೆಂಗಳೂರು ಅಭಿವೃದ್ಧಿ ಖಾತೆ ತಮಗೆ ಸಿಗಬೇಕು ಎಂಬ ಬೇಡಿಕೆಗೆ ರಾಮಲಿಂಗಾ ರೆಡ್ಡಿ ಹಲವು ಕಾರಣಗಳನ್ನು ಮುಂದಿಟ್ಟಿದ್ದಾರೆ. “ನಾನು ಬೆಂಗಳೂರಿನ ಹಿರಿಯ ಶಾಸಕ. ಎಂಟು ಬಾರಿ ಜನರಿಂದ ಆಯ್ಕೆಯಾಗಿದ್ದೇನೆ. ನಗರದ ಅಭಿವೃದ್ಧಿಗೆ ನನ್ನದೇ ಕೊಡುಗೆ ಇದೆ. ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದೇನೆ. ಬೆಂಗಳೂರಿನ ಇಂಚಿಂಚು ನನಗೆ ಗೊತ್ತು” ಎಂದು ಅವರು ಹೇಳಿದ್ದಾರೆ.
ಈಗ ಕಾಂಗ್ರೆಸ್ ಹೈಕಮಾಂಡ್ ರಾಮಲಿಂಗಾ ರೆಡ್ಡಿಯನ್ನು ಮನವೊಲಿಸಲು ಯಶಸ್ವಿಯಾಗುತ್ತದೆಯೇ ಅಥವಾ ಅವರ ರಾಜೀನಾಮೆಯನ್ನು ಅಂಗೀಕರಿಸುವ ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದರತ್ತ ರಾಜ್ಯ ರಾಜಕೀಯದ ಗಮನ ನೆಟ್ಟಿದೆ.