ನಾಗ್ಪುರ, ಜೂ. 05 (DaijiworldNews/AA): ಐಫೋನ್ ಗಿಫ್ಟ್ ಕೊಟ್ಟು ತಮ್ಮ ಗೆಳತಿಯರನ್ನು ಮೆಚ್ಚಿಸುವ ಆಸೆಯಿಂದ ಅಪ್ರಾಪ್ತರಿಬ್ಬರು 6.5 ಲಕ್ಷ ಮೌಲ್ಯದ ಐಷಾರಾಮಿ ನಲ್ಲಿಗಳನ್ನು ಕಳವು ಮಾಡಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಆರೋಪಿಗಳು ತಮ್ಮ ಪ್ರೇಯಸಿಯರಿಗೆ ದುಬಾರಿ ಬೆಲೆಯ ಐಫೋನ್ ಮೊಬೈಲ್ಗಳನ್ನು ಉಡುಗೊರೆಯಾಗಿ ನೀಡಲು ಹಣವಿಲ್ಲದೆ, ನಗರದ ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಟೈಲ್ಸ್ ಹಾಗೂ ಸ್ಯಾನಿಟರಿ ವೇರ್ ಅಂಗಡಿಯಲ್ಲಿ ಕಳ್ಳತನ ನಡೆಸಿದ್ದಾರೆ. ಬಳಿಕ ಆರೋಪಿಗಳು ತಾವು ಕದ್ದ ನಲ್ಲಿಗಳನ್ನು ಕೇವಲ 20,000 ರೂ.ಗೆ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮೇ 27ರ ಮಧ್ಯರಾತ್ರಿ ಅಂಗಡಿಯ ಮೇಲ್ಛಾವಣಿಯ ತಗಡಿನ ಶೀಟ್ಗಳನ್ನು ತೆಗೆದು ಆರೋಪಿಗಳು ಒಳನುಗ್ಗಿದ್ದಾರೆ. ಬಳಿಕ ಆರೋಪಿಗಳು ಸುಮಾರು 4 ಲಕ್ಷ ಮೌಲ್ಯದ ಚಿನ್ನದ ವಿನ್ಯಾಸದ ಐದು ನಲ್ಲಿಗಳು ಸೇರಿದಂತೆ ರೋಸ್ ಗೋಲ್ಡ್ ಮತ್ತು ಸಿಲ್ವರ್ ಬಣ್ಣದ ಐಷಾರಾಮಿ ನಲ್ಲಿಗಳನ್ನು ಕದ್ದೊಯ್ದಿದ್ದಾರೆ.
ಈ ಬಗ್ಗೆ ದೂರು ದಾಖಸಿಕೊಂಡ ಪೊಲೀಸರು, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಯಿತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.