ಬೆಂಗಳೂರು, ಜೂ. 05 (DaijiworldNews/TA): ರಾಜ್ಯದ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನದ ಹೊಗೆ ಎದ್ದಿರುವ ನಡುವೆಯೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಮ್ಮ ಇಲಾಖೆಯಲ್ಲಿ ಚುರುಕಿನ ಕಾರ್ಯಾರಂಭ ಮಾಡಿದ್ದಾರೆ. ಖಾತೆ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಚಿವರು ಇದೀಗ ಮಹಿಳೆಯರ ಆರೋಗ್ಯಕ್ಕಾಗಿ ವಿಶೇಷ ಯೋಜನೆ ರೂಪಿಸಲು ಮುಂದಾಗಿದ್ದಾರೆ.

ಸಚಿವರಾದ ಬಳಿಕ ಮಹಿಳೆಯರಿಗೆ ಸಮರ್ಪಿತವಾದ ಮೊದಲ ಯೋಜನೆಯನ್ನು ಜಾರಿಗೆ ತರಲು ಯು.ಟಿ. ಖಾದರ್ ಚಿಂತನೆ ನಡೆಸಿದ್ದು, ಇದರ ಭಾಗವಾಗಿ ವಿಶೇಷ ಅಧಿಕಾರಿಯನ್ನು ನೇಮಕ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ ಎಂದು ತಿಳಿದುಬಂದಿದೆ.
ಮಹಿಳೆಯರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ : ಪ್ರಸ್ತುತ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಹಿಳೆಯರ ಕಲ್ಯಾಣಕ್ಕೆ ಸಂಬಂಧಿಸಿದ ಅಂಶಗಳು ಸೇರಿದ್ದರೂ, ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ವಿಶೇಷ ಗಮನ ನೀಡುವ ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಮಹಿಳೆಯರ ಆರೋಗ್ಯ ಸೇವೆಗಳ ಮೇಲ್ವಿಚಾರಣೆ ಮತ್ತು ಯೋಜನೆಗಳ ಅನುಷ್ಠಾನಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲು ಸಚಿವರು ಮುಂದಾಗಿದ್ದಾರೆ ಎನ್ನಲಾಗಿದೆ.
ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಆರೋಗ್ಯ ಸೌಧಕ್ಕೆ ಭೇಟಿ ನೀಡಿದ ಯು.ಟಿ. ಖಾದರ್, ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇಲಾಖೆಯ ವಿವಿಧ ಯೋಜನೆಗಳು, ನೀತಿಗಳು, ವೈದ್ಯರ ಕೊರತೆ, ಆರೋಗ್ಯ ಸೇವೆಗಳ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಭೆಯ ಬಳಿಕ ಮಾತನಾಡಿದ ಸಚಿವ ಯು.ಟಿ. ಖಾದರ್, “13 ವರ್ಷಗಳ ಹಿಂದಿನ ಆರೋಗ್ಯ ವ್ಯವಸ್ಥೆಯೇ ಬೇರೆ, ಈಗಿನ ವ್ಯವಸ್ಥೆಯೇ ಬೇರೆ. ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯ ಕ್ಷೇತ್ರದ ಎಲ್ಲ ಆಯಾಮಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ” ಎಂದು ಹೇಳಿದರು.
“ದಂತ ಭಾಗ್ಯ, ಅಪಘಾತ ಚಿಕಿತ್ಸಾ ಯೋಜನೆ, ಆರೋಗ್ಯ ಸುರಕ್ಷಾ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಿಂದಿನ ಸಚಿವ ದಿನೇಶ್ ಗುಂಡೂರಾವ್ ಉತ್ತಮವಾಗಿ ನಿರ್ವಹಿಸಿದ್ದಾರೆ. ಆ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಖಾದರ್ ತಿಳಿಸಿದರು.
ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಕುರಿತು ಕೂಡ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಖಾತೆ ಹಂಚಿಕೆಯಾದ ಮೊದಲ ದಿನವೇ ಆಸ್ಪತ್ರೆ ಭೇಟಿ, ಅಧಿಕಾರಿಗಳ ಸಭೆ ಹಾಗೂ ಹೊಸ ಯೋಜನೆಗಳ ಚಿಂತನೆಯ ಮೂಲಕ ಯು.ಟಿ. ಖಾದರ್ ಇಲಾಖೆಯಲ್ಲಿ ವೇಗದ ಕಾರ್ಯಶೈಲಿಯ ಸಂದೇಶ ರವಾನಿಸಿದ್ದಾರೆ.