ಬೆಂಗಳೂರು, ಜೂ. 05 (DaijiworldNews/TA): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಅಸಮಾಧಾನವನ್ನು ಪಕ್ಷದ ನಾಯಕತ್ವ ಶಮನಗೊಳಿಸಲು ಮುಂದಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಮಾತುಕತೆಯ ಬಳಿಕ ಮುನಿಯಪ್ಪ ಸಮಾಧಾನಗೊಂಡಿದ್ದು, “ಐ ಆ್ಯಮ್ ಹ್ಯಾಪಿ” ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಹಿನ್ನೆಲೆಯಲ್ಲಿ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆಳವಣಿಗೆಯ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಮತ್ತೆ ನೀಡಿರುವುದಕ್ಕೆ ಕೆ.ಹೆಚ್. ಮುನಿಯಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ನಾಯಕರೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರ ಖಾತೆ ಹಂಚಿಕೆ ಕುರಿತ ವಿವಾದ ಮತ್ತು ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರವನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಮುನಿಯಪ್ಪ ಅವರ ಅಸಮಾಧಾನವೂ ಚರ್ಚೆಗೆ ಬಂದಿದೆ. ನಂತರ ಕೆ.ಹೆಚ್. ಮುನಿಯಪ್ಪ ಅವರು ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿಯಪ್ಪ, “ನಾನು ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೇನೆ. ರಾಹುಲ್ ಗಾಂಧಿ ಗೊಂದಲವನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ನಾನು ಸಂತೋಷವಾಗಿದ್ದೇನೆ” ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಮುನಿಯಪ್ಪ ಅವರ ಅಸಮಾಧಾನ ಸದ್ಯಕ್ಕೆ ಶಮನಗೊಂಡಿದ್ದು, ರಾಜೀನಾಮೆ ನೀಡುವ ಸಾಧ್ಯತೆಗಳಿಗೂ ತೆರೆ ಬಿದ್ದಂತಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಲಾಗಿತ್ತು. ನೂತನ ಸಚಿವ ಸಂಪುಟದಲ್ಲಿಯೂ ಅದೇ ಖಾತೆ ನೀಡಿರುವುದರಿಂದ ಅವರು ಬೇಸರಗೊಂಡಿದ್ದರು. ತಮಗೆ ಸಮಾಜ ಕಲ್ಯಾಣ ಇಲಾಖೆ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ನೇರವಾಗಿ ಸಂಬಂಧಿಸಿದ ಪ್ರಮುಖ ಖಾತೆ ನೀಡುವಂತೆ ಮೊದಲೇ ಮನವಿ ಮಾಡಿದ್ದರೂ, ಅದನ್ನು ಪರಿಗಣಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುನಿಯಪ್ಪ, “ನಾನು ರಾಜಕೀಯದಲ್ಲಿ ಎಂಟು ಬಾರಿ ಗೆದ್ದಿರುವ ಹಿರಿಯ ನಾಯಕ. ಸಚಿವ ಸಂಪುಟದಲ್ಲಿ ಸೀನಿಯಾರಿಟಿ ಮತ್ತು ಪ್ರೊಟೊಕಾಲ್ ಆಧಾರದ ಮೇಲೆ ಖಾತೆ ಹಂಚಿಕೆ ಆಗಬೇಕಿತ್ತು. ಆದರೆ ಅದನ್ನು ಗಮನದಲ್ಲಿಟ್ಟಂತೆ ಕಾಣುತ್ತಿಲ್ಲ” ಎಂದು ಬೇಸರ ಹೊರಹಾಕಿದ್ದರು.
ರಾಮಲಿಂಗಾ ರೆಡ್ಡಿ ರಾಜೀನಾಮೆ ಹಾಗೂ ಮುನಿಯಪ್ಪ ಅಸಮಾಧಾನದಿಂದ ಆರಂಭವಾದ ಖಾತೆ ವಿವಾದ ಕಾಂಗ್ರೆಸ್ ಸರ್ಕಾರಕ್ಕೆ ಆರಂಭಿಕ ಸವಾಲಾಗಿ ಪರಿಣಮಿಸಿದೆ. ಆದರೆ ರಾಹುಲ್ ಗಾಂಧಿ ಮಧ್ಯಪ್ರವೇಶದ ಬಳಿಕ ಮುನಿಯಪ್ಪ ಸಮಾಧಾನಗೊಂಡಿರುವುದು ಪಕ್ಷದ ನಾಯಕತ್ವಕ್ಕೆ ತಾತ್ಕಾಲಿಕ ನಿರಾಳತೆ ತಂದಿದೆ. ಇದೀಗ ರಾಮಲಿಂಗಾ ರೆಡ್ಡಿ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎಂಬುದರತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.