ಬೆಂಗಳೂರು, ಜೂ. 05 (DaijiworldNews/TA): ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನದ ಧ್ವನಿಗಳು ಕೇಳಿಬರಲು ಆರಂಭವಾಗಿವೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆಳವಣಿಗೆಯ ನಡುವೆಯೇ, ಕಾಂಗ್ರೆಸ್ನ ಹಿರಿಯ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಅವರ ಹಳೆಯ ಟ್ವೀಟ್ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೂನ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದ ಮಾರ್ಗರೇಟ್ ಆಳ್ವಾ, ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರಿಗೆ ಮತ್ತು ಅವರ ತಂಡಕ್ಕೆ ಶುಭ ಹಾರೈಸಿದ್ದರು. ಆದರೆ ಅದೇ ಟ್ವೀಟ್ನಲ್ಲಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
“ಇಂದು ಪ್ರಮಾಣವಚನ ಸ್ವೀಕರಿಸಿದ ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಕಾಂಗ್ರೆಸ್ ಮಹಿಳಾ ನಾಯಕಿಯನ್ನಾದರೂ ನೋಡಲು ನಾನು ಬಯಸಿದ್ದೆ. ಆದರೆ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯೂ ಇಲ್ಲದಿರುವುದು ತೀವ್ರ ನಿರಾಶೆ ಮೂಡಿಸಿದೆ” ಎಂದು ಮಾರ್ಗರೇಟ್ ಆಳ್ವಾ ತಮ್ಮ ಟ್ವೀಟ್ನಲ್ಲಿ ಹೇಳಿದ್ದರು.
ಈ ಟ್ವೀಟ್ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮಹಿಳಾ ಪ್ರತಿನಿಧಿತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವ ವಿಚಾರವನ್ನು ಬಿಜೆಪಿ ಕೂಡ ಪ್ರಸ್ತಾಪಿಸಿತ್ತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ನೂತನ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯೂ ಇಲ್ಲ. ಇದು ಮಹಿಳೆಯರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯ” ಎಂದು ಟೀಕಿಸಿದ್ದರು.
ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟ ವಿಸ್ತರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಸಚಿವಾಲಯದಲ್ಲಿ ಇನ್ನೂ ಹಲವು ಹುದ್ದೆಗಳು ಖಾಲಿ ಇವೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು. ಹಿಂದಿನ ಸರ್ಕಾರಗಳಲ್ಲಿಯೂ ಮೊದಲ ಹಂತದಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿರಲಿಲ್ಲ. ಮುಂದಿನ ಹಂತದಲ್ಲಿ ಖಂಡಿತವಾಗಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಲಾಗುವುದು” ಎಂದು ಸಿಎಂ ತಿಳಿಸಿದ್ದಾರೆ.
ಇದರ ನಡುವೆಯೇ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು ಬಾರಿ ಶಾಸಕರಾಗಿರುವ ರಾಮಲಿಂಗಾ ರೆಡ್ಡಿ ಅವರಿಗೆ ನೀಡಲಾದ ಖಾತೆ ವಿಚಾರವೂ ವಿವಾದಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ಅವರು ಬೆಂಗಳೂರು ಅಭಿವೃದ್ಧಿ ಖಾತೆಯ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ನೀರಾವರಿ ಇಲಾಖೆ ಹಂಚಿಕೆ ಮಾಡಲಾಗಿದ್ದು, ಇದರಿಂದ ಅಸಮಾಧಾನಗೊಂಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನೇ ಮತ್ತೆ ನೀಡಲಾಗಿದೆ. ಈ ಕುರಿತು ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಖಾತೆ ಹಂಚಿಕೆಯಲ್ಲಿ ತಮ್ಮ ಹಿರಿತನವನ್ನು ಪರಿಗಣಿಸಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಒಂದೆಡೆ ಮಹಿಳಾ ಪ್ರತಿನಿಧಿತ್ವದ ಪ್ರಶ್ನೆ, ಮತ್ತೊಂದೆಡೆ ಖಾತೆ ಹಂಚಿಕೆ ಕುರಿತ ಅಸಮಾಧಾನಗಳು ಕಾಂಗ್ರೆಸ್ ಸರ್ಕಾರಕ್ಕೆ ಆರಂಭಿಕ ಹಂತದಲ್ಲೇ ಸವಾಲಾಗಿ ಪರಿಣಮಿಸಿವೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆಗಳ ಮೂಲಕ ನಾಯಕತ್ವ ಅಸಮಾಧಾನ ಶಮನಗೊಳಿಸಲು ಮುಂದಾಗುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.