ನವದೆಹಲಿ, ಜೂ. 05 (DaijiworldNews/AA): ಪತಿ ದಿನಗಟ್ಟಲೆ ಪತ್ನಿಯೊಂದಿಗೆ ಮಾತನಾಡದೇ ಇರುವುದು ಕ್ರೌರ್ಯವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಪತ್ನಿಯ ಆತ್ಮಹತ್ಯೆ ಪ್ರಕರಣವೊಂದರ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, "ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಅದರ ಭಾಗವಾಗಿ ಕೆಲವು ದಿನಗಳ ಕಾಲ ದಂಪತಿಗಳ ನಡುವೆ ಮಾತುಕತೆ ನಿಲ್ಲುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಕಾನೂನಾತ್ಮಕ ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದೆ.
ಮದುವೆಯಾದ ಕೆಲವು ದಿನಗಳ ನಂತರ ಮಹಿಳೆಯು ವೀಸಾ ಪ್ರಕ್ರಿಯೆಯ ತಾಂತ್ರಿಕ ಕಾರಣಗಳಿಂದಾಗಿ ಮಸ್ಕತ್ನಲ್ಲಿದ್ದ ಪತಿಯೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ಆಕೆ ತನ್ನ ಪೋಷಕರ ಮನೆಯಲ್ಲಿದ್ದಾಗ, ಕೌಟುಂಬಿಕ ಅಸಮಾಧಾನದ ಹಿನ್ನೆಲೆಯಲ್ಲಿ ಪತಿಯು ಸುಮಾರು 13 ದಿನಗಳ ಕಾಲ ದೂರವಾಣಿ ಮೂಲಕ ಮಾತನಾಡಲು ನಿರಾಕರಿಸಿದ್ದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಆಧಾರದ ಮೇಲೆ ಪತಿ ಮತ್ತು ಅತ್ತೆ-ಮಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳದ ಮೊಕದ್ದಮೆ ದಾಖಲಿಸಲಾಗಿತ್ತು. ಜೊತೆಗೆ ಮದ್ರಾಸ್ ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಇದನ್ನು ಗಮನಿಸಿದ ಸುಪ್ರೀಂಕೋರ್ಟ್, ಕೇವಲ 13 ದಿನಗಳ ಕಾಲ ಫೋನ್ನಲ್ಲಿ ಮಾತನಾಡದಿರುವುದನ್ನು ಕ್ರೌರ್ಯ ಅನ್ನಲಾಗದು. ಪತ್ನಿಯು ತನ್ನ ಪೋಷಕರ ಮನೆಗೆ ಹೋಗಿದ್ದಕ್ಕೆ ಪತಿ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ ದಾಂಪತ್ಯದ ಭಾಗವೇ ಹೊರತು, ಅದು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಗಂಭೀರ ಅಪರಾಧವಲ್ಲ ಎಂದು ನ್ಯಾಯಪೀಠವು ತೀರ್ಪು ನೀಡಿದೆ. ಹಾಗೂ ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆಯ ತೀರ್ಪನ್ನು ರದ್ದುಗೊಳಿಸಿ, ಪತಿ ಹಾಗೂ ಆತನ ಕುಟುಂಬಸ್ಥರನ್ನು ಐಪಿಸಿ ಸೆಕ್ಷನ್ 4980 ಅಡಿಯಲ್ಲಿ ಸಂಪೂರ್ಣವಾಗಿ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.