ಬೆಂಗಳೂರು, ಜೂ. 05 (DaijiworldNews/TA): ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕಾರ್ಯಪ್ರವೃತ್ತರಾಗಿದ್ದಾರೆ. ಖಾತೆ ವಹಿಸಿಕೊಂಡ ಬೆನ್ನಲ್ಲೇ ಮಧ್ಯರಾತ್ರಿ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವರು, ಆಸ್ಪತ್ರೆಯಲ್ಲಿನ ವ್ಯವಸ್ಥೆ, ಸಿಬ್ಬಂದಿಗಳ ಹಾಜರಾತಿ, ರೋಗಿಗಳ ಆರೈಕೆ ಹಾಗೂ ತುರ್ತು ಚಿಕಿತ್ಸಾ ವಿಭಾಗದ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ರಾತ್ರಿ ಸುಮಾರು 12 ಗಂಟೆ ವೇಳೆಗೆ ಆಸ್ಪತ್ರೆಗೆ ಆಗಮಿಸಿದ ಸಚಿವ ಖಾದರ್, ಯಾವುದೇ ಪೂರ್ವ ಸೂಚನೆ ಇಲ್ಲದೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿಗಳನ್ನು ಅವಲೋಕಿಸಿದರು. ಆಸ್ಪತ್ರೆಯ ಸ್ವಚ್ಛತೆ, ವೈದ್ಯಕೀಯ ಸೇವೆಗಳು, ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಸಿಬ್ಬಂದಿಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು.
ಪರಿಶೀಲನೆ ವೇಳೆ ಕರ್ತವ್ಯಕ್ಕೆ ಗೈರಾಗಿದ್ದ ಕೆಲ ಸಿಬ್ಬಂದಿ ಹಾಗೂ ವೈದ್ಯರ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಹಾಜರಿರದ ಸಿಬ್ಬಂದಿಗಳ ಕುರಿತು ಮಾಹಿತಿ ಪಡೆದು, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಅಲ್ಲದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ನೇರವಾಗಿ ಮಾತನಾಡಿ ಸಮಸ್ಯೆಗಳು ಮತ್ತು ಸೇವೆಗಳ ಬಗ್ಗೆ ಮಾಹಿತಿ ಕಲೆಹಾಕಿದರು.
ನೆಲದ ಮೇಲೆ ಕುಳಿತಿದ್ದ ಗರ್ಭಿಣಿ ಕಂಡು ಗರಂ : ಆಸ್ಪತ್ರೆ ಪರಿಶೀಲನೆ ವೇಳೆ ಗರ್ಭಿಣಿಯೊಬ್ಬರು ನೆಲದ ಮೇಲೆ ಕುಳಿತಿರುವುದನ್ನು ಗಮನಿಸಿದ ಸಚಿವ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ರೋಗಿಗಳಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದರು.
ಹೆರಿಗೆ ವಿಭಾಗ, ಸಿಸೇರಿಯನ್ ವಾರ್ಡ್, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಸಚಿವರು, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ನೈಜ ಪರಿಸ್ಥಿತಿ ತಿಳಿಯಲು ಮಧ್ಯರಾತ್ರಿ ಭೇಟಿ’ : ಆಸ್ಪತ್ರೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, “ಆಸ್ಪತ್ರೆಯ ನೈಜ ಪರಿಸ್ಥಿತಿಯನ್ನು ಅರಿಯಲು ಮಧ್ಯರಾತ್ರಿ ಭೇಟಿ ನೀಡಿದ್ದೇನೆ. ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿ ಲೋಪದೋಷಗಳನ್ನು ಗುರುತಿಸಿದ್ದೇನೆ. ಕರ್ತವ್ಯಕ್ಕೆ ಗೈರಾಗಿದ್ದ ಇಬ್ಬರು ವೈದ್ಯರ ಬಗ್ಗೆ ಮಾಹಿತಿ ಪಡೆದಿದ್ದು, ಅವರಿಗೆ ಎಚ್ಚರಿಕೆ ನೀಡಿ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಸೂಚಿಸಲಾಗುವುದು” ಎಂದು ಹೇಳಿದರು.
“ಬೆಳಗಿನ ವೇಳೆಯಲ್ಲಿ ಸಭೆಗಳು ಮತ್ತು ಇತರೆ ಕಾರ್ಯಕ್ರಮಗಳಿರುತ್ತವೆ. ಆದರೆ ನಿಜವಾದ ಸ್ಥಿತಿ ತಿಳಿಯಬೇಕಾದರೆ ರಾತ್ರಿ ಸಮಯದಲ್ಲಿ ಭೇಟಿ ನೀಡುವುದು ಅಗತ್ಯ. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಎಷ್ಟೇ ಒತ್ತಡ ಇದ್ದರೂ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು” ಎಂದು ಸಚಿವರು ಹೇಳಿದರು.
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಖಾಸಗಿ ಆಂಬುಲೆನ್ಸ್ಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಇಲಾಖಾ ಮಟ್ಟದಲ್ಲಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. “ನಾಳೆ ಇಲಾಖೆಯ ಪರಿಶೀಲನಾ ಸಭೆ ನಡೆಯಲಿದೆ. ಖಾಸಗಿ ಆಂಬುಲೆನ್ಸ್ಗಳ ಕಾರ್ಯಾಚರಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ವೈದ್ಯರು ಮತ್ತು ಸಿಬ್ಬಂದಿ ನಿರ್ಭಯವಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು” ಎಂದು ಹೇಳಿದರು.
ಖಾತೆ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಚಿವ ಖಾದರ್ ನಡೆಸಿದ ಈ ದಿಢೀರ್ ಆಸ್ಪತ್ರೆ ಭೇಟಿ ಇದೀಗ ಆರೋಗ್ಯ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಸುಧಾರಣೆಗೆ ಇದು ಮುನ್ನುಡಿಯಾಗಬಹುದೇ ಎಂಬ ಪ್ರಶ್ನೆ ಮೂಡಿಸಿದೆ.