ಬೆಂಗಳೂರು, ಜೂ. 05 (DaijiworldNews/AK): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ.

ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನದ ರಾಜೀನಾಮೆ ನೀಡಿದ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ಮುಖಂಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪತಮಗೆ ನೀಡಿರುವ ಖಾತೆ ಬಗ್ಗೆ ಬಹಿರಂಗವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಖಾತೆ ಹಂಚಿಕೆಯಲ್ಲಿ ಹಿರಿತನವನ್ನು ಪರಿಗಣಿಸುತ್ತಿಲ್ಲ ಎಂದು ಹೈಕಮಾಂಡ್ ವಿರುದ್ಧವೇ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ನಾನು ಈಗಾಗಲೇ 8 ಬಾರಿ ಗೆದ್ದಿರುವ ಹಿರಿಯ ರಾಜಕಾರಣಿ. ಆದರೆ ಖಾತೆ ಹಂಚಿಕೆಯಲ್ಲಿ ನಮ್ಮ ಹಿರಿತನವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದಲ್ಲಿ ಎಲ್ಲರನ್ನೂ ಸಮತೋಲನವಾಗಿ ನೋಡಬೇಕಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ನಾಯಕರನ್ನೂ ಒಂದೇ ಕಣ್ಣಿನಿಂದ ನೋಡಬೇಕು’ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಈ ರೀತಿಯ ಗೊಂದಲಗಳು ಪಕ್ಷಕ್ಕೆ ಒಳ್ಳೆಯದಲ್ಲ, ಇಲಾಖೆಗಳ ಹಂಚಿಕೆ ಸರಿಯಾಗಿಲ್ಲದಿದ್ದರೆ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕವಿದೆ ಎಂದು ಅವರು ಎಚ್ಚರಿಸಿದ್ದಾರೆ.
ತಾವು ಈಗಾಗಲೇ ಮೂರು ವರ್ಷಗಳ ಕಾಲ ಆಹಾರ ಇಲಾಖೆಯನ್ನು ನಿಭಾಯಿಸಿರುವ ಅನುಭವ ಹೊಂದಿದ್ದು, ಈ ಬಾರಿ ತಮಗೆ ಜನರ ನೇರ ಸೇವೆಗೆ ಮುಕ್ತ ಅವಕಾಶವಿರುವ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆಯನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾಗಿ ಮುನಿಯಪ್ಪ ತಿಳಿಸಿದ್ದಾರೆ. ನನ್ನ ಖಾತೆಯನ್ನು ಶೀಘ್ರದಲ್ಲೇ ಬದಲಾವಣೆ ಮಾಡಿಕೊಡಲಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ಮುನಿಯಪ್ಪ ಹೇಳಿದ್ದಾರೆ.