ಬೆಂಗಳೂರು, ಜೂ. 04 (DaijiworldNews/TA): ರಾಜ್ಯದಲ್ಲಿ ಹೆಚ್ಚುತ್ತಿರುವ ರೌಡಿಸಂ, ಡ್ರಗ್ಸ್ ದಂಧೆ, ಜೂಜಾಟ, ಮಟ್ಕಾ ಹಾಗೂ ಇತರೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ತಾಲೂಕಿನಲ್ಲಿ ವಿಶೇಷ ಪೊಲೀಸ್ ಸ್ಕ್ವಾಡ್ಗಳನ್ನು ರಚಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಕುರಿತು ಸಿಎಂ ಮಹತ್ವದ ನಿರ್ದೇಶನಗಳನ್ನು ನೀಡಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಹೊಸ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
“ರೌಡಿಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಲು ಹಾಗೂ ಅಪರಾಧಗಳನ್ನು ತಡೆಗಟ್ಟಲು ರಾಜ್ಯದ ಎಲ್ಲ ತಾಲೂಕುಗಳಲ್ಲಿ ವಿಶೇಷ ಸ್ಕ್ವಾಡ್ಗಳನ್ನು ರಚಿಸಲು ಸೂಚಿಸಿದ್ದೇನೆ. ಪ್ರತಿ ತಂಡದಲ್ಲಿ 10 ರಿಂದ 15 ಪೊಲೀಸ್ ಸಿಬ್ಬಂದಿ ಇರಲಿದ್ದು, ಸ್ಥಳೀಯ ಮಟ್ಟದಲ್ಲಿ ರೌಡಿಶೀಟರ್ಗಳು ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಕಣ್ಣಿಟ್ಟಿರುತ್ತಾರೆ,” ಎಂದು ಸಿಎಂ ಹೇಳಿದರು.
ವಿಶೇಷ ಸ್ಕ್ವಾಡ್ಗಳ ಪ್ರಮುಖ ಜವಾಬ್ದಾರಿಗಳಲ್ಲಿ ಹಳೆಯ ರೌಡಿಶೀಟರ್ಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು, ಅಪರಾಧ ಜಗತ್ತಿನತ್ತ ಆಕರ್ಷಿತರಾಗುತ್ತಿರುವ ಯುವಕರನ್ನು ಗುರುತಿಸುವುದು ಹಾಗೂ ಅವರನ್ನು ತಪ್ಪು ದಾರಿಯಿಂದ ಹೊರತರುವ ಕ್ರಮ ಕೈಗೊಳ್ಳುವುದು ಸೇರಿದೆ. ಅಲ್ಲದೆ, ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿಯೂ ಈ ತಂಡಗಳ ಮೇಲಿರಲಿದೆ.
ಡ್ರಗ್ಸ್, ಜೂಜಾಟ, ಅಕ್ರಮ ದಂಧೆ ವಿರುದ್ಧ ಕಠಿಣ ಕ್ರಮ : ರಾಜ್ಯದ ಹಲವು ಭಾಗಗಳಲ್ಲಿ ಡ್ರಗ್ಸ್, ಗಾಂಜಾ, ಜೂಜಾಟ, ಅಕ್ರಮ ಮರಳು ಸಾಗಣೆ ಹಾಗೂ ಮಟ್ಕಾ ದಂಧೆಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿಎಂ, ಇಂತಹ ಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕೊಲೆ, ಸುಲಿಗೆ ಹಾಗೂ ಮಾದಕ ವಸ್ತುಗಳ ಜಾಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಪಡಿಸುವುದು ಹಾಗೂ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ವಿಶೇಷ ಸ್ಕ್ವಾಡ್ಗಳ ರಚನೆಯಿಂದ ಅಪರಾಧ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದ್ದಾರೆ.
“ಅಪರಾಧ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ರಾಜ್ಯವನ್ನು ಸುರಕ್ಷಿತವಾಗಿಡಲು ಸರ್ಕಾರ ಬದ್ಧವಾಗಿದೆ,” ಎಂದು ಡಿಕೆ ಶಿವಕುಮಾರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.