ಬೆಂಗಳೂರು, ಜೂ. 04 (DaijiworldNews/TA): ರಸ್ತೆ ಗುಂಡಿಗಳು ದೇಶದಾದ್ಯಂತ ವಾಹನ ಸವಾರರ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿವೆ. ಗುಂಡಿ ತಪ್ಪಿಸಲು ಹೋಗಿ ಅಪಘಾತ, ಟೈರ್ ಪಂಕ್ಚರ್, ಅಲಾಯ್ ವೀಲ್ ಹಾನಿ, ಸಸ್ಪೆನ್ಷನ್ ದೋಷ ಸೇರಿದಂತೆ ಹಲವು ತೊಂದರೆಗಳು ವಾಹನ ಮಾಲೀಕರಿಗೆ ದುಬಾರಿ ದುರಸ್ತಿ ವೆಚ್ಚವನ್ನು ತಂದೊಡ್ಡುತ್ತಿವೆ. ಆದರೆ ರಸ್ತೆ ಗುಂಡಿಯಿಂದ ನಿಮ್ಮ ವಾಹನಕ್ಕೆ ಹಾನಿಯಾಗಿದ್ದರೆ, ಸಂಬಂಧಿತ ಅಧಿಕಾರಿಗಳಿಂದ ಪರಿಹಾರ ಪಡೆಯುವ ಅವಕಾಶವೂ ಇದೆ.

ಭಾರತೀಯ ನ್ಯಾಯಾಲಯಗಳು ಹಲವು ಬಾರಿ ಸುರಕ್ಷಿತ ರಸ್ತೆ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಸ್ಪಷ್ಟಪಡಿಸಿದ್ದು, ವಿವಿಧ ಪ್ರಕರಣಗಳಲ್ಲಿ ಹಾನಿಗೊಳಗಾದವರಿಗೆ ಸಾವಿರಗಳಿಂದ ಲಕ್ಷಾಂತರ ರೂಪಾಯಿವರೆಗೆ ಪರಿಹಾರ ನೀಡಿರುವ ಉದಾಹರಣೆಗಳಿವೆ.
ರಸ್ತೆ ಗುಂಡಿಯಿಂದ ಹಾನಿಯಾದರೆ ಮೊದಲು ಏನು ಮಾಡಬೇಕು?
1. ಫೋಟೋ ಮತ್ತು ವಿಡಿಯೋ ದಾಖಲಿಸಿ : ಅಪಘಾತ ಅಥವಾ ಹಾನಿ ಸಂಭವಿಸಿದ ತಕ್ಷಣ ರಸ್ತೆ ಗುಂಡಿ ಹಾಗೂ ವಾಹನಕ್ಕೆ ಉಂಟಾದ ಹಾನಿಯ ಸ್ಪಷ್ಟ ಫೋಟೋ ಮತ್ತು ವಿಡಿಯೋಗಳನ್ನು ದಾಖಲಿಸಬೇಕು. ಸಾಧ್ಯವಾದರೆ GPS ಸೌಲಭ್ಯವಿರುವ ಕ್ಯಾಮೆರಾ ಅಥವಾ ಮೊಬೈಲ್ ಆ್ಯಪ್ ಬಳಸಿ ಸ್ಥಳ, ದಿನಾಂಕ ಹಾಗೂ ಸಮಯದ ಮಾಹಿತಿಯೊಂದಿಗೆ ಸಾಕ್ಷ್ಯ ಸಂಗ್ರಹಿಸಿಕೊಳ್ಳುವುದು ಉತ್ತಮ.
2. ಅಧಿಕೃತ ದುರಸ್ತಿ ಬಿಲ್ ಪಡೆಯಿರಿ : ವಾಹನವನ್ನು ಅಧಿಕೃತ ಸರ್ವಿಸ್ ಸೆಂಟರ್ಗೆ ಕೊಂಡೊಯ್ದು ಹಾನಿಯ ಸಂಪೂರ್ಣ ವಿವರ ಒಳಗೊಂಡ ದುರಸ್ತಿ ಅಂದಾಜು ಅಥವಾ ಬಿಲ್ ಪಡೆಯಬೇಕು. ಈ ದಾಖಲೆಗಳು ಪರಿಹಾರ ಕೋರುವ ಸಂದರ್ಭದಲ್ಲಿ ಪ್ರಮುಖ ಸಾಕ್ಷ್ಯವಾಗಿರುತ್ತವೆ.
3. ಸಂಬಂಧಿತ ಇಲಾಖೆಗೆ ದೂರು ನೀಡಿ : ಸ್ಥಳೀಯ ಮಹಾನಗರ ಪಾಲಿಕೆ, ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆ (PWD)ಗೆ ಜಿಯೋ-ಟ್ಯಾಗ್ ಫೋಟೋಗಳು ಮತ್ತು ದುರಸ್ತಿ ದಾಖಲೆಗಳೊಂದಿಗೆ ಅಧಿಕೃತ ದೂರು ಸಲ್ಲಿಸಬೇಕು. ಆನ್ಲೈನ್ ಪೋರ್ಟಲ್ ಅಥವಾ ಲಿಖಿತ ರೂಪದಲ್ಲೂ ದೂರು ದಾಖಲಿಸಬಹುದು.
4. ದೂರು ಸ್ವೀಕೃತಿ ದಾಖಲೆಯನ್ನು ಉಳಿಸಿಕೊಳ್ಳಿ : ದೂರು ಸಲ್ಲಿಸಿದ ಬಳಿಕ ದೊರೆಯುವ ಸ್ವೀಕೃತಿ ಪತ್ರ, ರೆಫರೆನ್ಸ್ ನಂಬರ್ ಅಥವಾ ಅಕ್ನಾಲೆಡ್ಜ್ಮೆಂಟ್ ಸ್ಕ್ರೀನ್ಶಾಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮುಂದಿನ ಕಾನೂನು ಕ್ರಮಗಳಲ್ಲಿ ಇದೇ ಪ್ರಮುಖ ದಾಖಲೆ ಆಗುತ್ತದೆ.
ಯಾವ ಕಾನೂನುಗಳಡಿ ಪರಿಹಾರ ಕೇಳಬಹುದು? : ರಸ್ತೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಿತ ಸ್ಥಳೀಯ ಸಂಸ್ಥೆ ಅಥವಾ ಇಲಾಖೆಯ ವಿರುದ್ಧ ವಿವಿಧ ಕಾನೂನುಗಳಡಿ ಪರಿಹಾರ ಕೋರಬಹುದು.
-ಸಂವಿಧಾನದ ವಿಧಿ 21 ಅಡಿಯಲ್ಲಿ ಸುರಕ್ಷಿತವಾಗಿ ಸಂಚರಿಸುವ ಹಕ್ಕು ನಾಗರಿಕರಿಗೆ ಇದೆ.
-ಟಾರ್ಟ್ ಕಾನೂನು (Law of Torts) ಅಡಿಯಲ್ಲಿ ನಿರ್ಲಕ್ಷ್ಯಕ್ಕಾಗಿ ಪರಿಹಾರ ಕೋರಿ ಮೊಕದ್ದಮೆ ಹೂಡಬಹುದು.
-ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅಡಿಯಲ್ಲಿ ರಸ್ತೆ ನಿರ್ವಹಣೆಯನ್ನೂ ಸೇವೆಯಾಗಿ ಪರಿಗಣಿಸಿ ಸೇವಾ ಲೋಪದ ಪ್ರಕರಣ ದಾಖಲಿಸಬಹುದು.
-ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 232 ರಸ್ತೆ ಲೋಪದಿಂದ ಉಂಟಾಗುವ ಹಾನಿಗೆ ಪರಿಹಾರ ನೀಡಲು ಅವಕಾಶ ಕಲ್ಪಿಸುತ್ತದೆ.
ಎಷ್ಟು ಪರಿಹಾರ ಸಿಗಬಹುದು? : ಪ್ರಕರಣದ ಸ್ವರೂಪ, ಹಾನಿಯ ಪ್ರಮಾಣ ಹಾಗೂ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಪರಿಹಾರದ ಮೊತ್ತ ಬದಲಾಗುತ್ತದೆ.
ವಾಹನ ಹಾನಿ ಪ್ರಕರಣಗಳಲ್ಲಿ : ರೂ. 10,000 ರಿಂದ ರೂ. 2 ಲಕ್ಷದವರೆಗೆ
ಗಾಯಗಳಾದರೆ : ರೂ. 50,000 ರಿಂದ ರೂ. 2.5 ಲಕ್ಷದವರೆಗೆ
ಮರಣ ಪ್ರಕರಣಗಳಲ್ಲಿ: ರೂ. 6 ಲಕ್ಷ ಅಥವಾ ಅದಕ್ಕಿಂತ ಹೆಚ್ಚು
ಅಧಿಕಾರಿಗಳು ಸ್ಪಂದಿಸದಿದ್ದರೆ? : ನಿಮ್ಮ ದೂರಿಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮೊದಲಿಗೆ ಕಾನೂನು ನೋಟಿಸ್ ನೀಡಬಹುದು. ಬಳಿಕ ಗ್ರಾಹಕ ನ್ಯಾಯಾಲಯ ಅಥವಾ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಅವಕಾಶವಿದೆ. ರಸ್ತೆ ಗುಂಡಿಯ ಬಗ್ಗೆ ಅಧಿಕಾರಿಗಳಿಗೆ ಮುಂಚೆಯೇ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದಿರುವುದು ಸಾಬೀತಾದರೆ ನಿಮ್ಮ ಪ್ರಕರಣ ಮತ್ತಷ್ಟು ಬಲವಾಗಬಹುದು.
ಸುರಕ್ಷಿತ ಮತ್ತು ಗುಂಡಿಮುಕ್ತ ರಸ್ತೆ ಪಡೆಯುವುದು ನಾಗರಿಕರ ಹಕ್ಕು. ರಸ್ತೆ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದಿಂದ ನಿಮಗೆ ನಷ್ಟವಾದರೆ ಕಾನೂನುಬದ್ಧವಾಗಿ ಪರಿಹಾರ ಕೋರುವ ಅವಕಾಶವಿದೆ. ಸರಿಯಾದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಯಶಸ್ವಿ ಕ್ಲೇಮ್ಗೆ ಪ್ರಮುಖ ಅಂಶವಾಗಿದೆ.