ಬೆಂಗಳೂರು, ಜೂ. 04 (DaijiworldNews/TA): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಪ್ರತಿಜ್ಞಾವಿಧಿಯ ವೇಳೆ ಉಚ್ಚರಿಸಿದ ಒಂದು ಹೆಸರು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್, “ವೀರ ಗಂಗಾಧರ ಅಜ್ಜಯ್ಯ” ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೀಗಾಗಿ, ಈ ಅಜ್ಜಯ್ಯ ಯಾರು? ಡಿಕೆಶಿ ಅವರೊಂದಿಗೆ ಇರುವ ಸಂಬಂಧವೇನು ಎಂಬ ಕುತೂಹಲ ಜನರಲ್ಲಿ ಮೂಡಿದೆ.

ನೊಣವಿನಕೆರೆ ಅಜ್ಜಯ್ಯ ಎಂದರೆ ಯಾರು? : ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಶ್ರೀ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಯವರನ್ನು ಭಕ್ತರು ಪ್ರೀತಿಯಿಂದ “ಅಜ್ಜಯ್ಯ” ಎಂದು ಕರೆಯುತ್ತಾರೆ. ವೀರಶೈವ ಸಂಪ್ರದಾಯದ ಈ ಮಠವು ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ.
500 ವರ್ಷಗಳ ಇತಿಹಾಸ ಹೊಂದಿರುವ ಕಾಡಸಿದ್ದೇಶ್ವರ ಮಠ : ಸುಮಾರು ಐದು ಶತಮಾನಗಳ ಇತಿಹಾಸ ಹೊಂದಿರುವ ಕಾಡಸಿದ್ದೇಶ್ವರ ಮಠವು ನೊಣವಿನಕೆರೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಕಾಡಿನ ಮಧ್ಯೆ ಸ್ಥಾಪನೆಯಾದ ಕಾರಣ ಇದಕ್ಕೆ “ಕಾಡಸಿದ್ದೇಶ್ವರ ಮಠ” ಎಂಬ ಹೆಸರು ಬಂದಿದೆ. ನೊಳಂಬರ ಕಾಲದಿಂದಲೂ ಈ ಪ್ರದೇಶ ಶೈವ ಪರಂಪರೆಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಕಾಡಸಿದ್ದೇಶ್ವರರ ಕುರಿತ ಪೌರಾಣಿಕ ಕತೆ : ಮಠದ ಇತಿಹಾಸದ ಪ್ರಕಾರ, ಕಾಡಸಿದ್ದೇಶ್ವರ ಸ್ವಾಮೀಜಿಗಳು ತಪಸ್ಸಿನಲ್ಲಿ ನಿರತರಾಗಿದ್ದಾಗ ಅವರನ್ನು ಕಾಡುಪ್ರಾಣಿ ಎಂದು ಭಾವಿಸಿದ ಪಾಲೇಗಾರ ಮುದಿಯಪ್ಪ ನಾಯಕ ಬಾಣ ಹಾರಿಸಿದ್ದಾನೆ. ಆದರೆ ಬಾಣ ತಾಗಿದರೂ ಸ್ವಾಮೀಜಿಗಳಿಗೆ ಯಾವುದೇ ಹಾನಿಯಾಗಲಿಲ್ಲ ಎನ್ನಲಾಗುತ್ತದೆ. ಬಳಿಕ ತನ್ನ ತಪ್ಪಿನ ಅರಿವಾದ ಮುದಿಯಪ್ಪ ನಾಯಕ ಕ್ಷಮೆ ಯಾಚಿಸಿ, ಸ್ವಾಮೀಜಿಗಳ ಆಶೀರ್ವಾದ ಪಡೆದನೆಂದು ಹೇಳಲಾಗುತ್ತದೆ.
ಮುದಿಯಪ್ಪ ನಾಯಕ ನಿರ್ಮಿಸಿದ ಮಠ : ಸ್ವಾಮೀಜಿಗಳ ಮಹಿಮೆಗೆ ಮಾರುಹೋದ ಮುದಿಯಪ್ಪ ನಾಯಕ ನಂತರ ಮಠ ಹಾಗೂ ಗದ್ದುಗೆಯನ್ನು ನಿರ್ಮಿಸಿದನೆಂದು ನಂಬಲಾಗಿದೆ. ಇದೇ ಸ್ಥಳವು ಇಂದಿನ ಕಾಡಸಿದ್ದೇಶ್ವರ ಮಠದ ಮೂಲ ಕೇಂದ್ರವೆಂದು ಪರಿಗಣಿಸಲಾಗುತ್ತದೆ.
ಪ್ರಸ್ತುತ ಪೀಠಾಧ್ಯಕ್ಷರಾದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು ಭವಿಷ್ಯ ನುಡಿಯುವವರಾಗಿ ಭಕ್ತರಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಜಾತಕ, ದೋಷ ನಿವಾರಣೆ, ಹರಕೆ ಫಲಸಿದ್ಧಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಾವಿರಾರು ಭಕ್ತರ ವಿಶ್ವಾಸ ಗಳಿಸಿದ್ದಾರೆ.
ಈ ಮಠಕ್ಕೆ ಸಾಮಾನ್ಯ ಭಕ್ತರಷ್ಟೇ ಅಲ್ಲದೆ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಿನಿರಂಗದ ಗಣ್ಯರೂ ಭೇಟಿ ನೀಡುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಅನೇಕ ರಾಜಕೀಯ ನಾಯಕರು ಮಠದೊಂದಿಗೆ ಆಪ್ತ ಸಂಪರ್ಕ ಹೊಂದಿದ್ದರು.
ಡಿಕೆ ಶಿವಕುಮಾರ್ ಹಲವು ವರ್ಷಗಳಿಂದ ನೊಣವಿನಕೆರೆ ಮಠದ ಭಕ್ತರಾಗಿದ್ದಾರೆ. ಮಹತ್ವದ ರಾಜಕೀಯ ಹಾಗೂ ವೈಯಕ್ತಿಕ ನಿರ್ಧಾರಗಳ ಮುನ್ನ ಸ್ವಾಮೀಜಿಗಳ ಆಶೀರ್ವಾದ ಮತ್ತು ಸಲಹೆ ಪಡೆಯುವುದು ಅವರ ರೂಢಿಯಾಗಿದೆ ಎಂದು ಆಪ್ತ ವಲಯಗಳು ಹೇಳುತ್ತವೆ.
ಐಟಿ ಹಾಗೂ ಇಡಿ ಪ್ರಕರಣಗಳ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಜೈಲಿನಿಂದ ಬಿಡುಗಡೆಯಾದ ನಂತರ ಡಿಕೆ ಶಿವಕುಮಾರ್ ಭೇಟಿ ನೀಡಿದ ಮೊದಲ ಧಾರ್ಮಿಕ ಕ್ಷೇತ್ರವೇ ನೊಣವಿನಕೆರೆ ಮಠ ಎನ್ನಲಾಗಿದೆ. ಆ ಸಂದರ್ಭದಲ್ಲಿ ಸ್ವಾಮೀಜಿಗಳು “ನಿಮ್ಮ ಕಷ್ಟಗಳು ಕರಗುತ್ತವೆ, ಉನ್ನತ ಸ್ಥಾನಮಾನ ಸಿಗುತ್ತದೆ” ಎಂದು ಆಶೀರ್ವದಿಸಿದ್ದರೆಂದು ಹೇಳಲಾಗುತ್ತದೆ.
ಡಿಕೆ ಶಿವಕುಮಾರ್ ಅವರೇ ಹಲವು ಸಂದರ್ಭಗಳಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ತಂದೆ ಗಂಭೀರ ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರು ಆಶಾಭಾವನೆ ಕಳೆದುಕೊಂಡಿದ್ದರು. ಆಗ ಅಜ್ಜಯ್ಯ ಸ್ವಾಮೀಜಿಗಳು ನೀಡಿದ ಬಿಲ್ವಪತ್ರೆಯನ್ನು ಸೂಚಿಸಿದಂತೆ ತಂದೆಯ ತಲೆಯ ಕೆಳಗೆ ಇಡಲಾಯಿತು. ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತೆಂದು ಡಿಕೆಶಿ ಹೇಳಿಕೊಂಡಿದ್ದಾರೆ. ಈ ಘಟನೆಯ ನಂತರ ಅವರ ಭಕ್ತಿ ಇನ್ನಷ್ಟು ಗಟ್ಟಿಯಾಯಿತು ಎನ್ನಲಾಗುತ್ತದೆ.
ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಮುಖ ರಾಜಕೀಯ ನಿರ್ಧಾರಗಳವರೆಗೆ ಡಿಕೆ ಶಿವಕುಮಾರ್ ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಮುಖ್ಯಮಂತ್ರಿ ಹುದ್ದೆಯ ಕುರಿತಾಗಿ ಕೂಡ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು ಎನ್ನುವ ನಂಬಿಕೆ ಭಕ್ತರಲ್ಲಿ ಇದೆ.
ಪ್ರಸ್ತುತ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾಗಿ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು ಕಾರ್ಯನಿರ್ವಹಿಸುತ್ತಿದ್ದು, ಧಾರ್ಮಿಕ, ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಮಠವನ್ನು ಮುನ್ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಉಲ್ಲೇಖಿಸಿದ “ವೀರ ಗಂಗಾಧರ ಅಜ್ಜಯ್ಯ” ಹೆಸರು ಇದೀಗ ಮತ್ತೊಮ್ಮೆ ನೊಣವಿನಕೆರೆ ಮಠ ಹಾಗೂ ಅದರ ಆಧ್ಯಾತ್ಮಿಕ ಪರಂಪರೆಯತ್ತ ಜನರ ಗಮನ ಸೆಳೆದಿದೆ.