ಭೋಪಾಲ್, ಜೂ. 02 (DaijiworldNews/AK): ಮಾಡೆಲ್, ನಟಿ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಗಂಡ-ಅತ್ತೆ ಇಬ್ಬರೂ ಜೈಲುಪಾಲಾಗಿದ್ದು, ಜೂನ್ 16ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿ ವಿಶೇಷ ಸಿಬಿಐ ಕೋರ್ಟ್ ಆದೇಶಿಸಿದೆ.

ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿರುವ ತ್ವಿಶಾ ಶರ್ಮಾ ಅವರ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ಸಿಬಿಐ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಮಂಗಳವಾರ (ಜೂ.2) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿಚಾರಣೆ ವೇಳೆ ಎರಡೂ ಕಡೆಯ ವಕೀಲರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ತ್ವಿಶಾ ಶರ್ಮಾ ಪರ ವಕೀಲ ಅನುರಾಗ್ ಶ್ರೀವಾಸ್ತವ್ ಜಬಲ್ಪುರ ಕೋರ್ಟ್ ಆವರಣದಲ್ಲಿ ಸಮರ್ಥ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಾಯಿ ಗಿರಿಬಾಲಾ ಸಿಂಗ್ ಅವರು ಆರೋಪಿಸಿದರು. ಆದರೆ ಈ ಆರೋಪ ನಿರಾಕರಿಸಿದ ಶ್ರೀವಾಸ್ತವ್ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿದರು. ಜೊತೆಗೆ ಜಬಲ್ಪುರದಲ್ಲಿ ವಿಚಾರಣೆ ಸಮಯದಲ್ಲಿ ಸಮರ್ಥ್ ಸಿಂಗ್ ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಇತ್ತ ತ್ವಿಶಾ ಶರ್ಮಾ ಪ್ರಕರಣದ ಪ್ರಮುಖ ಸಾಕ್ಷಿ ನೀರಜ್ ದುಬೆ ಮೇಲೆ ಆರೋಪಿ ಸಮರ್ಥ್ ಸಿಂಗ್ ಸ್ನೇಹಿತರು ಹಲ್ಲೆ ನಡೆಸಿರುವ ವಿಡಿಯೋವೊಂದು ವೈರಲ್ ಆಗಿದೆ. ಮೇ 30ರಂದು ಭೋಪಾಲ್ನಲ್ಲಿ ನೀರಜ್ ದುಬೆ ಸುತ್ತುವರಿದ ನಾಲ್ಕೈದು ಮಂದಿ ಹಲ್ಲೆ ನಡೆಸಿದರು. ತಕ್ಷಣವೇ ದುಬೆ ಕಟಾರಾ ಹಿಲ್ಸ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.