ಬೆಂಗಳೂರು,ಜೂ. 02 (DaijiworldNews/AK): ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತ್ತು ಅಲ್ಪಸಂಖ್ಯಾತರನ್ನು ಓಲೈಸಲು ಆಳಂದದ ಶ್ರೀ ರಾಘವ ಚೈತನ್ಯ ಮಂದಿರದ ಮೇಲೆ ದಾಳಿ ಮಾಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದೆ ಎಂದು ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಕಲಬುರ್ಗಿಯ ಆಳಂದದಲ್ಲಿ ಪವಿತ್ರ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಅಪಮಾನ ಎಸಗಿ, ಕೋಮು ಉದ್ವಿಗ್ನತೆ ಸೃಷ್ಟಿಸಿದ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ ಗಂಭೀರ ಪ್ರಕರಣಗಳ ಹಲವು ಕೇಸ್ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯ.
ಇಂತಹ ಸಮಾಜವಿರೋಧಿ ಹಾಗೂ ಕ್ರಿಮಿನಲ್ ತತ್ವಗಳ ಬೆನ್ನಿಗೆ ನಿಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರ ತಾನು ಜನವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ, ಸಂವಿಧಾನವಿರೋಧಿ ಹಾಗೂ ಜನವಿರೋಧಿಯಾದ ಈ ಆದೇಶವನ್ನು ತಕ್ಷಣವೇ ರದ್ದುಪಡಿಸುವಂತೆ ಗೌರವಾನ್ವಿತ ರಾಜ್ಯಪಾಲರಿಗೆ ಇಂದು ಮನವಿ ಸಲ್ಲಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಘಟನೆಯ ವಿಚಾರಣೆ ಕೋರ್ಟ್ನಲ್ಲಿ ಬಾಕಿ ಇರುವಾಗಲೇ ಸರ್ಕಾರ ದಾಳಿಕೋರರ ಮೇಲಿನ ಪ್ರಕರಣವನ್ನು ವಾಪಸ್ ಪಡೆದಿದೆ. ಇದನ್ನು ವಾಪಸ್ ಪಡೆಯಬಾರದು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ರಾಘವ ಚೈತನ್ಯ ಮಂದಿರದಲ್ಲಿನ ಶಿವಲಿಂಗಕ್ಕೆ ಆರು ನೂರು ವರ್ಷಗಳ ಇತಿಹಾಸವಿದೆ. ಇಲ್ಲಿ ಪದೇ ಪದೇ ಗಲಭೆಗಳು ಆಗಿವೆ. ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು.
ಶಿವಲಿಂಗದ ಮೇಲೆ ಮಲಮೂತ್ರ ಮಾಡಿದ್ದನ್ನು ಸ್ವಚ್ಛಗೊಳಿಸುತ್ತಿದ್ದವರ ಮೇಲೆ, ಪೂಜೆ ಮಾಡಲು ಸೇರಿದ್ದ ಹಿಂದೂಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಜನರು ತಲವಾರು ಮಚ್ಚಿನಿಂದ ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೂ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ವಾಹನಗಳನ್ನು ಜಖಂ ಮಾಡಿದ್ದಾರೆ. ಜಿಲ್ಲಾಧಿಕಾರಿ ಮೇಲೂ ದಾಳಿ ನಡೆದಿದೆ. ಇದೊಂದು ದೊಡ್ಡ ಘಟನೆ. ಆದರೆ ರಾಜ್ಯ ಸರ್ಕಾರ ಇಷ್ಟೆಲ್ಲಾ ಆದರೂ ಏನೂ ಆಗಿಲ್ಲವೆಂಬಂತೆ ಪ್ರಕರಣವನ್ನು ಹಿಂದಕ್ಕೆ ಪಡೆದಿದೆ ಎಂದು ದೂರಿದರು.