ಕೋಲ್ಕತ್ತಾ,ಜೂ. 02 (DaijiworldNews/AK): ಪಶ್ಚಿಮ ಬಂಗಾಳದಲ್ಲಿ ಭೂ ವಿವಾದ ಬಗೆಹರಿಸುವುದಾಗಿ ಗ್ರಾಮಸ್ಥರಿಂದ ವಸೂಲಿ ಮಾಡಲಾಗಿದ್ದ ಹಣವನ್ನುತೃಣಮೂಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ವಾಪಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಂಚಾಗಢ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕೀರ್ ಕುತ್ತಿ ಪ್ರದೇಶದ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಕರೆದು ಸ್ಥಳೀಯ ಟಿಎಂಸಿ ನಾಯಕರು ಗ್ರಾಮಸ್ಥರಿಗೆ ಹಣ ಹಿಂತಿರುಗಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಬೂತ್ ಅಧ್ಯಕ್ಷ ತಪನ್ ಡೇ ಹಲವು ಗ್ರಾಮಸ್ಥರಿಂದ ವಸೂಲಿ ಮಾಡಿದ್ದ ಹಣವನ್ನು ಹಿಂದಿರುಗಿಸಿದ್ದಾರೆ. ಸ್ಥಳೀಯ ಟಿಎಂಸಿ ಮುಖಂಡ ಬಾಬೈ ಬರ್ಮನ್ ತಲೆಮರೆಸಿಕೊಂಡಿದ್ದು, ಅವರ ಪರವಾಗಿ ಅವರ ತಂದೆ ಹಣ ವಾಪಸ್ ನೀಡಿದ್ದಾರೆ.
ಪಂಚಾಯಿತಿ ಸದಸ್ಯರು ಮತ್ತು ಕೆಲ ಟಿಎಂಸಿ ನಾಯಕರು ಸೇರಿ ಗ್ರಾಮಸ್ಥರಿಂದ ಸುಮಾರು 80 ಲಕ್ಷ ರೂ. ಹಣ ಸಂಗ್ರಹಿಸಿದ್ದರು. ಕಾನೂನು ಕ್ರಮದ ಭಯದಿಂದ ಈಗ ಕೆಲವು ನಾಯಕರು ಹಣ ವಾಪಸ್ ನೀಡಲು ಮುಂದಾಗಿದ್ದಾರೆ ಎಂದು ಸ್ಥಳೀಯ ಬಿಜೆಪಿ ಘಟಕದ ಅಧ್ಯಕ್ಷ ಸುರೇಂದ್ರ ಬರ್ಮನ್ ಹೇಳಿದರು.