ನವದೆಹಲಿ, ಜೂ. 01 (DaijiworldNews/AA): ದೇಶದಲ್ಲಿ ತೈಲ ಮತ್ತು ಇಂಧನ ಪೂರೈಕೆ ಸಮರ್ಪಕವಾಗಿದ್ದು, ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವಾಲಯ ತಿಳಿಸಿದೆ.

ದೆಹಲಿಯಲ್ಲಿಂದು ಅಂತರ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಇಂಧನ ಅಕ್ರಮ ದಾಸ್ತಾನು ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ 460 ಎಲ್ಪಿಜಿ ವಿತರಣಾ ಏಜನ್ಸಿಗಳ ಮೇಲೆ ದಿಢೀರ್ ತಪಾಸಣೆ ನಡೆಸಲಾಗಿದ್ದು, 10 ಎಫ್ಐಆರ್ ದಾಖಲಿಸಲಾಗಿದೆ. 22 ಎಲ್ಪಿಜಿ ವಿತರಣಾ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಕಳೆದ ಮೂರು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಿಸುವ 1,300 ಬಂಕ್ ಗಳ ಮೇಲೆ ದಿಢೀರ್ ತಪಾಸಣೆ ನಡೆಸಲಾಗಿದ್ದು, 960 ಲೀಟರ್ ಪೆಟ್ರೋಲ್ ಮತ್ತು 2,194 ಲೀಟರ್ ಡೀಸೆಲ್ ಜಪ್ತಿ ಮಾಡಲಾಗಿದೆ. 18 ಪ್ರಕರಣ ದಾಖಲಿಸಲಾಗಿದ್ದು, 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಈ ಮಧ್ಯೆ, ಕೊಳವೆ ಮಾರ್ಗದ ನೈಸರ್ಗಿಕ ಅನಿಲ ಪೂರೈಕೆಗಾಗಿ 8,78,000 ಸಾವಿರ ಹೊಸ ಗ್ರಾಹಕರು ನೋಂದಣಿಯಾಗಿದ್ದು, 2,96,000 ಹೆಚ್ಚುವರಿ ಸಂಪರ್ಕಕ್ಕೆ ಮೂಲ ಸೌಕರ್ಯ ನಿರ್ಮಿಸಲಾಗಿದೆ. ಈವರೆಗೆ 77,800 ಕ್ಕೂ ಹೆಚ್ಚು ಪಿಎಲ್ಜಿ ಗ್ರಾಹಕರು ತಮ್ಮ ಎಲ್ಪಿಜಿ ಸಂಪರ್ಕ ವಾಪಸ್ ಮಾಡಿದ್ದಾರೆ ಎಂದರು.
ಕಳೆದ ಮೂರು ದಿನಗಳಲ್ಲಿ 1.22 ಕೋಟಿ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಆಗಿದ್ದು, ಈ ಪೈಕಿ 1.21 ಕೋಟಿ ಸಿಲಿಂಡರ್ ಪೂರೈಸಲಾಗಿದೆ. ಕಳೆದ ಮೂರು ದಿನಗಳಲ್ಲಿ 22,661 ಟನ್ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಮಾರಾಟವಾಗಿದ್ದು, ಮೇ ತಿಂಗಳಲ್ಲಿ ಒಟ್ಟು 2,09,000 ಟನ್ ವಾಣಿಜ್ಯ ಸಿಲಿಂಡರ್ ಮಾರಾಟವಾಗಿದೆ ಎಂದು ಮಾಹಿತಿ ನೀಡಿದರು.