ಭರತ್ಪುರ, ಜೂ. 01 (DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯಲ್ಲಿ ಒಂದು ಬಾರಿ ಉತ್ತೀರ್ಣರಾಗುವುದೇ ಸವಾಲಾಗಿರುವಾಗ ಎರಡೆರಡು ಬಾರಿ ಉತ್ತೀರ್ಣರಾಗಿರುವ ನಿಖಿಲ್ ಶರ್ಮಾ ಅವರ ಯಶೋಗಾಥೆ ಇದು.

ನಿಖಿಲ್ ಅವರು ಭರತ್ಪುರದ ಬಯಾನಾ ತಹಸಿಲ್ನ ಕಲ್ಸಡಾ ಗ್ರಾಮದವರಾಗಿದ್ದಾರೆ. ಅವರ ತಂದೆ ಗೋಪಾಲ್ ಶರ್ಮಾ ನಿವೃತ್ತ ಶಿಕ್ಷಕರಾಗಿದ್ದು, ಹಿರಿಯ ಸಹೋದರ ನರೇಂದ್ರ ಶರ್ಮಾ ಬ್ಯಾಂಕೊಂದರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಖಿಲ್ ತಮ್ಮ ಆರಂಭಿಕ ಶಿಕ್ಷಣವನ್ನು ಕೋಟಾದಲ್ಲಿ ಪೂರ್ಣಗೊಳಿಸಿದರು. ಅಲ್ಲಿ 12ನೇ ತರಗತಿ ಮುಗಿಸಿದ ನಂತರ ಬಯಾಲಜಿಯಲ್ಲಿ ಬಿಎಸ್ಸಿ ಪದವಿ ಪಡೆದರು. ಆಡಳಿತಾತ್ಮಕ ಸೇವೆಗೆ ಸೇರುವುದು ಅವರ ಬಾಲ್ಯದ ಕನಸಾಗಿತ್ತು, ಹೀಗಾಗಿ ಅವರು ತಮ್ಮ ಸಂಪೂರ್ಣ ಗಮನವನ್ನು ಯುಪಿಎಸ್ಸಿ ಸಿದ್ಧತೆಯತ್ತಲೇ ಹರಿಸಿದ್ದರು.
ನಿಖಿಲ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡಿದ್ದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ 252ನೇ ರ್ಯಾಂಕ್ ಪಡೆದು ಐಪಿಎಸ್ಗೆ ಆಯ್ಕೆಯಾಗಿದ್ದರು.
2024ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ನಿಖಲ್ ಅವರು 104ನೇ ರ್ಯಾಂಕ್ ಗಳಿಸಿದ್ದಾರೆ. ವಿಶೇಷವೆಂದರೆ, ಹೈದರಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಪ್ರಸ್ತುತ ಐಪಿಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿರುವಾಗಲೇ ಅವರು ಈ ಸಾಧನೆ ಮಾಡಿದ್ದಾರೆ.