ಕಾರವಾರ, ಮೇ. 31 (DaijiworldNews/AA): ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ ಏಳು ಮಂದಿ ಮೀನುಗಾರರನ್ನ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಸಮುದ್ರದಲ್ಲಿ ನಡೆದಿದೆ.

ಅಂಕೋಲದ ಬೆಳಂಬಾರ ಕಡಲತೀರದಿಂದ ಮೀನುಗಾರಿಕೆಗೆ ಮಂಜುನಾಥ್ ಕಾರ್ವಿ ಎಂಬವರ ಮಾಲೀಕತ್ವದ ಶ್ರೀ ನವರತ್ನ ಹೆಸರಿನ ಬೋಟ್ ತೆರಳಿತ್ತು. ಹೊನ್ನಾವರದ ತಾರೇಬಾಗಿಲು ಸಮೀಪ ಮೀನುಗಾರಿಕೆ ನಡೆಸುವಾಗ ಬೋಟಿನ ಹೊರಭಾಗಕ್ಕೆ ಹಾನಿಯಾಗಿದೆ. ಹೀಗಾಗಿ ಬೋಟ್ ಒಳಗೆ ನೀರು ತುಂಬಿ ಮುಳುಗಡೆಯಾಗಿದೆ.
ತಕ್ಷಣ ಸ್ಥಳೀಯ ಮೀನುಗಾರಿಕಾ ಬೋಟ್ ನಲ್ಲಿದ್ದವರು ಏಳುಜನ ಮೀನುಗಾರರ ರಕ್ಷಣೆ ಮಾಡಿದ್ದಾರೆ. ಘಟನೆಯಿಂದಾಗಿ ಅಂದಾಜು 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.