ಕೋಲ್ಕತ್ತಾ, ಮೇ. 31 (DaijiworldNews/AA): ಅಭಿಷೇಕ್ ಬ್ಯಾನರ್ಜಿ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತೆ ಬಿಜೆಪಿ ನಾಯಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿ ಆಸ್ಪತ್ರೆ ಮೇಲೆ ಒತ್ತಡ ಹೇರಿದ್ದಾರೆ. ಬಿಜೆಪಿಯವರು ಅವರನ್ನ ಕೊಲ್ಲಲು ಸಂಚು ರೂಪಿಸಿದ್ದು ಇದರಿಂದ ಸ್ಪಷ್ಟವಾಗಿದೆ ಎಂದು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಟಿಎಂಸಿ ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿದ್ದ ವೇಳೆ ಬೀದಿಯಲ್ಲೇ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು," ಅಭಿಷೇಕ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನ ಐಸಿಯುಗೆ ದಾಖಲಿಸಲಾಗಿದೆ. 3ಡಿ ಸ್ಕ್ಯಾನ್, ಅಲ್ಟ್ರಾಸೊನೋಗ್ರಫಿ ಹಾಗೂ ಎದೆ ಭಾಗದ ಪರೀಕ್ಷೆ ಸೇರಿದಂತೆ ಇನ್ನಿತರ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ" ಎಂದು ಹೇಳಿದರು.
"ಬಿಜೆಪಿ ನಾಯಕರು ಹಾಗೂ ಉಪಪೊಲೀಸ್ ಆಯುಕ್ತರು ವೈದ್ಯರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಪೋಲೋ ಆಸ್ಪತ್ರೆಯ ವೈದ್ಯರು ಅಭಿಷೇಕ್ ಆರೋಗ್ಯ ಪರೀಕ್ಷಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯಬಹುದೆಂದು ಸಲಹೆ ನೀಡಿದ್ದರು. ಅದರಂತೆ ಮನೆಗೆ ಕರೆದುಕೊಂಡು ಬರಲಾಯಿತು. ಆದರೆ ಅವರ ಅಭಿಷೇಕ್ ಆರೋಗ್ಯದಲ್ಲಿ ಸ್ಥಿರತೆ ಕಂಡುಬರದ ಕಾರಣ ಚಿಕಿತ್ಸೆಗಾಗಿ ಬೆಲ್ಲವ್ಯೂ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಜೀವಕ್ಕೆ ಏನಾದರೂ ಅಪಾಯವಾದಲ್ಲಿ ಆಸ್ಪತ್ರೆ ಮತ್ತು ವೈದ್ಯರೇ ಜವಾಬ್ದಾರರಾಗುತ್ತಾರೆ" ಎಂದು ಕಿಡಿಕಾರಿದ್ದಾರೆ.
"ಸದ್ಯಕ್ಕೆ ಅಭಿಷೇಕ್ ಕುಟುಂಬಸ್ಥರು ಹಾಗೂ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಮನೆಯಲ್ಲೇ ಆಕ್ಸಿಜನ್ ಸಿಲಿಂಡರ್ ಮತ್ತು ಇತರ ವೈದ್ಯಕೀಯ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಇದು ಭದ್ರತಾ ಉಲ್ಲಂಘನೆಯ ಗಂಭೀರ ಪ್ರಕರಣ. ಹಲ್ಲೆ ನಡೆದ ವೇಳೆ ಹೆಲ್ಮೆಟ್ ಇಲ್ಲದಿದ್ದರೆ, ಅಭಿಷೇಕ್ ಸ್ಥಳದಲ್ಲೇ ಸಾಯುತ್ತಿದ್ದರು" ವಾಗ್ದಾಳಿ ನಡೆಸಿದ್ದಾರೆ.
"ರಾಹುಲ್ ಗಾಂಧಿ ನನಗೆ ಕರೆ ಮಾಡಿ ಏನಾದರೂ ಸಹಾಯದ ಅಗತ್ಯವಿದ್ದರೆ ಹೇಳಿ. ಅಭಿಷೇಕ್ ಬ್ಯಾನರ್ಜಿ ಅವರ ಚಿಕಿತ್ಸೆಗಾಗಿ ಹೈದರಾಬಾದ್ ಅಥವಾ ಬೇರೆ ಎಲ್ಲಿಗಾದರೂ ಕರೆದೊಯ್ಯಬಹುದು ಎಂದು ಬೆಂಬಲ ನೀಡಿದ್ದಾರೆ. ಇತ್ತ ವಕೀಲ ಕಪಿಲ್ ಸಿಬಲ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಕರೆ ಮಾಡಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು" ಎಂದರು.
"ಬಂಗಾಳದಲ್ಲಿ ಭದ್ರತಾ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವದ ಕೊಲೆಯಾಗಿದೆ. ಅಭಿಷೇಕ್ ಸೋನಾರ್ಪುರದ ಕಾರ್ಯಕರ್ತರ ಮನೆಗೆ ಭೇಟಿ ನೀಡುವ ವಿಚಾರವನ್ನು ಪೊಲೀಸರಿಗೆ ಮುಂಚೆಯೇ ತಿಳಿಸಲಾಗಿತ್ತು. ಸಿಐಡಿ ಹೇಡಿಯಂತೆ ವರ್ತಿಸುತ್ತಿದೆ. ಸರ್ಕಾರ ಘಟನೆ ತಡೆಯುವುದನ್ನು ಬಿಟ್ಟು ಕಿಡಿಗೇಡಿಗಳಿಗೆ ಕುಮ್ಮಕ್ಕು ಕೊಟ್ಟಿದೆ. ದೆಹಲಿಯ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದ ಕೆಲವು ಬಿಜೆಪಿ ನಾಯಕರಂತೆ ಕೆಟ್ಟವರಲ್ಲ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಭಾನುವಾರ ವಿವಿಧೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಸೋಮವಾರ ರಾಣಿ ರಶ್ಮೋನಿ ರಸ್ತೆಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯ ನೇತೃತ್ವ ವಹಿಸುವುದಾಗಿ" ತಿಳಿಸಿದ್ದಾರೆ.