ನವದೆಹಲಿ, ಮೇ. 30 (DaijiworldNews/AA): ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಡಾನ್ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಹೊಂದಿದ್ದ 9 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಗಳು ದೆಹಲಿ, ಮುಂಬೈ ಮತ್ತು ಪಂಜಾಬ್ ನಿವಾಸಿಗಳು ಮತ್ತು ಕೆಲವರು ವಿದೇಶಿ ಪ್ರಜೆಗಳಾಗಿದ್ದಾರೆ. ಬಂಧಿತರಿದ ಅಪಾರ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಮಾಣು ಸ್ಥಾವರ, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವ ಸಂಚು ಬಂಧಿತರ ಪಟ್ಟಿಯಲ್ಲಿತ್ತು ಎಂದು ದೆಹಲಿ ಪೊಲೀಸರ ವಿಶೇಷ ಘಟಕ ತಿಳಿಸಿದೆ.
ಬಂಧಿತರಿಗೆ ಇರುವ ಗಡಿಯಾಚೆಗಿನ ಸಂಪರ್ಕಗಳು, ಹಣಕಾಸಿನ ಮಾರ್ಗಗಳು ಮತ್ತು ಮಾಡ್ಯೂಲ್ನ ಚಟುವಟಿಕೆಗಳನ್ನು ನಿರ್ದೇಶಿಸುವಲ್ಲಿ ವಿದೇಶಿ ನಿರ್ವಾಹಕರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಯೋತ್ಪಾದಕ ದಾಳಿ ಬಗ್ಗೆ ಸಂಚು ರೂಪಿಸಿದ್ದ ಕುರಿತು ಗುಪ್ತಚರ ಮಾಹಿತಿ ಬೆನ್ನಲ್ಲೇ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.