ಹಾವೇರಿ,ಮೇ. 29 (DaijiworldNews/AK): ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದಿರುವುದು ಡಿ.ಕೆ.ಶಿವಕುಮಾರ್ಗೆ ತೂಗುಗತ್ತಿ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಾಲ್ಕು ದಶಕಗಳ ಕಾಲ ಸುದೀರ್ಘ ರಾಜಕಾರಣ ಮಾಡಿ ರಾಜಕೀಯ ಮಾಡಿದ್ದಾರೆ. 1983 ರಲ್ಲಿ ರಾಜಕೀಯಕ್ಕೆ ಬಂದಿದ್ದರು. ಎಲ್ಲಕ್ಕಿಂತ ಹೆಚ್ಚು ಅವರು ಅಹಿಂದ ಮಾಡಿದಾಗ ನಾನೊಬ್ಬನೇ ಅಹಿಂದ ವರ್ಗ ಬಿಟ್ಟು ಮುಖ್ಯ ಭಾಷಣ ಮಾಡಿದ್ದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಸನ್ಮಾನ ಸಮಾರಂಭಕ್ಕೆ ಬಂದಾಗ ಅವರೇ ನೆನಪು ಮಾಡಿದ್ದರು ಎಂದರು.
. 2007 ರಲ್ಲಿ ಜೆಡಿಎಸ್ನಿಂದ ಹೊರ ಬಂದು ಕಾಂಗ್ರೆಸ್ ನಿಂದ ಉಪ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆಗ ನಾನು ಅವರಿಗೆ ಸಹಾಯ ಮಾಡಿದ್ದೆ. ಯಾವಾಗ ಅವರಿಗೆ ಕಷ್ಟ ಕಾಲ ಬಂದಿದೆ ಆಗ ಸಹಾಯ ಮಾಡಿದ್ದೆ. ಯಾವಾಗ ಅವರು ಕಾಂಗ್ರೆಸ್ಗೆ ಹೋದರೋ ಆಗ ಅವರ ರಾಜಕೀಯ ಸಿದ್ಧಾಂತ ಬೇರೆ ಬೇರೆಯಾಗಿದೆ. ರಾಜಕೀಯವಾಗಿ ಯಾವತ್ತೂ ಹೊಂದಾಣಿಕೆ ಆಗಿಲ್ಲ. ವೈಯಕ್ತಿಕವಾಗಿ ಸಂಬಂಧ ಚೆನ್ನಾಗಿ ಇದೆ ಎಂದು ಹೇಳಿದರು.
ಸಿದ್ದರಾಮಯ್ಯ ಸಮಾಜವಾದಿಯಾಗಿ ಸಾಮಾಜಿಕ ಕಳಕಳಿ ಇರುವ ನಾಯಕ. ಅವರನ್ನು ತೆಗೆಯುವ ಮೂಲಕ ಹಿಂದುಳಿದ ವರ್ಗದ ನಾಯಕನಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಮಂಡಲ್ ಕಮಿಷನ್ನಿಂದ ಹಿಡಿದು ಯಾವಾಗಲೂ ಅನ್ಯಾಯ ಮಾಡುತ್ತ ಬಂದಿದ್ದಾರೆ. ರಾಜೀವ್ ಗಾಂಧಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಯಾಕೆ ಬೇಕು ಎಂದು ಕೇಳಿದ್ದರು. ರಾಹುಲ್ ಗಾಂಧಿ ಜಾತಿಗಣತಿ ಮಾಡಬೇಕು ಎನ್ನುತ್ತಾರೆ. ಒಬಿಸಿ ಪರ ಮಾತನಾಡುತ್ತಲೇ ಒಬಿಸಿ ಮುಖ್ಯಮಂತ್ರಿಯನ್ನು ತೆಗೆದು ಹಾಕಿದ್ದಾರೆ ಎಂದರು.