ಬೆಂಗಳೂರು, ಮೇ. 29 (DaijiworldNews/TA): ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನು ತಿರುವು ಬರುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ ಎನ್ನುವ ಮಾತಿಗೆ ಈ ಮೇ ತಿಂಗಳು ಜೀವಂತ ಉದಾಹರಣೆಯಾಗಿದೆ. ಕಳೆದ 30 ದಿನಗಳ ಅವಧಿಯಲ್ಲಿ ದೇಶದ ನಾಲ್ವರು ಪ್ರಭಾವಿ ಮುಖ್ಯಮಂತ್ರಿಗಳು ವಿವಿಧ ಕಾರಣಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.

ಚುನಾವಣಾ ಸೋಲು, ಜನಾದೇಶ, ಪಕ್ಷದ ಒಳರಾಜಕೀಯ ಹಾಗೂ ಅಧಿಕಾರ ಹಂಚಿಕೆ ಒಪ್ಪಂದಗಳ ಹಿನ್ನೆಲೆ ನಾಲ್ವರು ಘಟಾನುಘಟಿ ನಾಯಕರು ಅಧಿಕಾರ ತ್ಯಜಿಸಿದ್ದು, ರಾಷ್ಟ್ರ ರಾಜಕೀಯ ಸಮೀಕರಣಗಳ ಮೇಲೂ ದೊಡ್ಡ ಪರಿಣಾಮ ಬೀರಿದೆ.
ರಾಜೀನಾಮೆ ನೀಡಿದ ನಾಲ್ವರು ಮುಖ್ಯಮಂತ್ರಿಗಳು:
1. ಪಿಣರಾಯಿ ವಿಜಯನ್ – ಕೇರಳ : ಏಪ್ರಿಲ್ 9ರಂದು ನಡೆದ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4ರಂದು ಪ್ರಕಟವಾಗಿದ್ದು, ಎಡರಂಗ ಭಾರೀ ಹಿನ್ನಡೆ ಅನುಭವಿಸಿತು. ಕೇವಲ 35 ಸ್ಥಾನಗಳಿಗೆ ಕುಸಿದ ಎಡರಂಗದ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತು. ಸೋಲಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಸಲ್ಲಿಸಿದರು. ವಿಶೇಷವಾಗಿ, ತಮ್ಮ ಧರ್ಮಡಂ ಕ್ಷೇತ್ರದಲ್ಲಿಯೇ ಸೋಲು ಅನುಭವಿಸಿದ್ದು ಎಡರಂಗಕ್ಕೆ ದೊಡ್ಡ ಆಘಾತವಾಯಿತು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ರಾಜೀನಾಮೆ ಅಂಗೀಕರಿಸಿ, ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸೂಚಿಸಿದರು.
2. ಎಂ.ಕೆ. ಸ್ಟಾಲಿನ್ – ತಮಿಳುನಾಡು : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಭಾರೀ ಗೆಲುವು ಸಾಧಿಸಿ 108 ಸ್ಥಾನಗಳನ್ನು ಗೆದ್ದಿತು. ಇನ್ನೊಂದೆಡೆ ಆಡಳಿತಾರೂಢ ಡಿಎಂಕೆ ಕೇವಲ 59 ಸ್ಥಾನಗಳಿಗೆ ಸೀಮಿತವಾಯಿತು. ಭಾರೀ ಸೋಲಿನ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದರು. ದ್ರಾವಿಡ ರಾಜಕೀಯದ ಪ್ರಮುಖ ಧ್ವನಿಯಾಗಿದ್ದ ಸ್ಟಾಲಿನ್ ಅವರ ನಿರ್ಗಮನ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ರಾಜ್ಯಪಾಲರು ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸೂಚಿಸಿದರು.
3. ಮಮತಾ ಬ್ಯಾನರ್ಜಿ – ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ಬೆಳವಣಿಗೆ ಬೇರೆ ರೀತಿಯ ತಿರುವು ಪಡೆದುಕೊಂಡಿತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದರೆ, ತೃಣಮೂಲ ಕಾಂಗ್ರೆಸ್ 80 ಸ್ಥಾನಗಳಿಗೆ ಕುಸಿಯಿತು. ಆದರೆ, ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗ ಪಕ್ಷಪಾತ ಮಾಡಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದರು. ಈ ಬೆಳವಣಿಗೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು, ಬಳಿಕ ರಾಜ್ಯಪಾಲರು ಮಧ್ಯಪ್ರವೇಶಿಸಿ ವಿಧಾನಸಭೆಯನ್ನು ವಿಸರ್ಜಿಸಿದರು. ನಂತರ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮೇ 9ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
4. ಸಿದ್ದರಾಮಯ್ಯ – ಕರ್ನಾಟಕ : ಕರ್ನಾಟಕ ರಾಜಕೀಯದಲ್ಲೂ ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಒಪ್ಪಂದದಂತೆ 2.5 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರು. ರಾಜಭವನದಲ್ಲಿ ರಾಜ್ಯಪಾಲರ ಅನುಪಸ್ಥಿತಿಯಿಂದ ಅವರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸಿದ್ದರಾಮಯ್ಯ, “ಹೈಕಮಾಂಡ್ ಆದೇಶ ಪಾಲಿಸಿದ್ದೇನೆ” ಎಂದು ತಿಳಿಸಿದರು. ಇದೇ ವೇಳೆ, “ರಾಜ್ಯಸಭೆಗೆ ಹೋಗುವುದಿಲ್ಲ. ಕೋಮುವಾದದ ವಿರುದ್ಧ ಹೋರಾಟ ಮುಂದುವರಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.
ದೇಶ ರಾಜಕೀಯದಲ್ಲಿ ಹೊಸ ಸಮೀಕರಣ : ಒಂದೇ ತಿಂಗಳಲ್ಲಿ ದಕ್ಷಿಣ ಭಾರತದ ಮೂರು ಪ್ರಮುಖ ನಾಯಕರು ಹಾಗೂ ಪಶ್ಚಿಮ ಬಂಗಾಳದ ಪ್ರಭಾವಿ ನಾಯಕತ್ವದಲ್ಲಿ ನಡೆದ ಬದಲಾವಣೆ ರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ದಶಕಗಳ ಎಡ ಹಾಗೂ ದ್ರಾವಿಡ ಪ್ರಾಬಲ್ಯಕ್ಕೆ ಸವಾಲು ಎದುರಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪ್ರಭಾವಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಸ್ತಾಂತರದ ಹೊಸ ರಾಜಕೀಯ ಪರೀಕ್ಷೆ ಆರಂಭವಾಗಿದೆ.