ಬೆಂಗಳೂರು,ಮೇ. 28 (DaijiworldNews/AK): ನಾನು ಯಾವತ್ತಿಗೂ ಸಿದ್ಧಾಂತ, ಮೌಲ್ಯಗಳಲ್ಲಿ ರಾಜೀ ಮಾಡಿಕೊಂಡಿಲ್ಲ. ಅಧಿಕಾರದ ಹಿಂದೆ ಹೋದವನಲ್ಲ, ಆಸ್ತಿ ಹಣದ ಹಿಂದೆ ಬಿದ್ದಿಲ್ಲ. ಆಸ್ತಿ – ಹಣ ಮಾಡಬೇಕು ಅಂತಲೂ ಅನ್ನಿಸಲಿಲ್ಲ. ಜನಶಕ್ತಿ ಇದ್ರೆ ರಾಜಕಾರಣ ಮಾಡಬಹುದು ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಜೀನಾಮೆ ಪತ್ರವನ್ನುರಾಜ್ಯಪಾಲರ ಕಾರ್ಯದರ್ಶಿಗೆ ಹಸ್ತಾಂತರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು , 8 ವರ್ಷ ಸಿಎಂ, ಎರಡು ಸಲ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಕಾಂಗ್ರೆಸ್ ಅವಕಾಶ ಕೊಟ್ಟಿದೆ. ಸೋನಿಯಾ ಗಾಂಧಿ ಅವರು ನನ್ನನ್ನ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡರು. ಆಗ ನನ್ನೊಟ್ಟಿಗೆ 8 ಜನ ಶಾಸಕರೂ ಸೇರಿಕೊಂಡಿದ್ರು. ಅವರಲ್ಲಿ ಈಗ ಕೆಲವರು ಇಲ್ಲ. ಅವರಿಗೆಲ್ಲ ಚಿರಋಣಿ. ನಾನು ಕಡೇ ತನಕ ಕೋಮುವಾದಿಗಳ ವಿರುದ್ಧ ಹೋರಾಡ್ತೀನಿ. ಕೊನೇ ಉಸಿರಿರುವ ತನಕ ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದರು.
ಎರಡು ಬಾರಿ ಸಿಎಂ ಎರಡು ಬಾರಿ ವಿಪಕ್ಷ ನಾಯಕನ ಸ್ಥಾನದ ಅವಕಾಶ ಸಿಕ್ಕಿತು. ಹಳ್ಳಿಯಿಂದ ಬಂದ ನಾನು ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ವಿಪಕ್ಷ ನಾಯಕನಾಗುತ್ತೇನೆ ಅಥವಾ ಸಿಎಂ ಆಗುತ್ತೇನೆಂದು ಕನಸು ಕಂಡಿರಲಿಲ್ಲ. ನಾನು ಕಾಂಗ್ರೆಸ್ ಸೇರಿದ್ದು 2006 ರಲ್ಲಿ ಅಲ್ಲಿಂದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಶಾಸಕರು ಸಂಸದರು ನನಗೆ ಪ್ರೀತಿ ತೋರಿಸಿದ್ದಾರೆ. ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು. ನಾನು 2 ಬಾರಿ ಸಿಎಂ ಆಗಿದ್ದಾಗ ನನ್ನ ಜೊತೆ ಕೆಲಸ ಮಾಡಿದ ನನ್ನ ಸಹೋದ್ಯೋಗಿಗಳು ಎಲ್ಲಾ ರೀತಿಯ ಬೆಂಬಲ ಸಹಕಾರ ಪ್ರೀತಿ ವ್ಯಕ್ತಪಡಿಸಿದ್ದಾರೆ, ಅದಕ್ಕೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ ಎಂದು ಹಳೆಯ ನೆನಪುಗಳನ್ನ ಮೆಲುಕುಹಾಕಿದರು.
ಇದೇ ವೇಳೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯ ಕೊನೆಯಲ್ಲಿ ಎಲ್ಲರೂ ಕೈ ಹಿಡಿದು ಮೇಲಕ್ಕೆ ಎತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದರು.