ಬೆಂಗಳೂರು,ಮೇ. 28 (DaijiworldNews/AK): ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಬ್ರೇಕ್ಫಾಸ್ಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಸಿಎಂ ಸ್ಥಾನಕ್ಕೆ ರಾಜೀನಾಮೆಗೂ ಮುನ್ನ ಸಚಿವರ ಜೊತೆ ಸಿದ್ದರಾಮಯ್ಯ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದರು. ಸಭೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಘೋಷಿಸುತ್ತಿದ್ದಂತೆ ಆಪ್ತ ಸಚಿವರು ಭಾವುಕರಾದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾನು ಇಲ್ಲೇ ಇರಬೇಕು ಅಂದ್ಕೊಂಡು ಇದ್ದೀನಿ. ರಾಷ್ಟ್ರ ರಾಜಕಾರಣ ನನಗೆ ಇಷ್ಟ ಇಲ್ಲ, ನಾನು ಬೇಡ ಅಂದಿದ್ದೇನೆ. ಇಲ್ಲೇ ಇದ್ದುಕೊಂಡು ಸಹಕಾರ ಕೊಡುತ್ತೇನೆ . ಮುಂದೆ ಅಧಿಕಾರಕ್ಕೆ ತರಬೇಕು, ಗ್ಯಾರಂಟಿಗಳನ್ನ ಕಷ್ಟಪಟ್ಟು ಅನುಷ್ಠಾನ ಮಾಡಿದ್ದೀವಿ, ಮುಂದುವರಿಸೋಣ ಎಂದು ಸಚಿವರಿಗೆ ಸಲಹೆ ನೀಡಿದರು.
ಗ್ಯಾರಂಟಿ ಯೋಜನೆ ಉಳಿಸಿಕೊಂಡು ಆರ್ಥಿಕ ಶಿಸ್ತು ಕಾಪಾಡಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಮುಂದುವರಿಯಿರಿ ಎಂದು ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಕಿವಿಮಾತು ಹೇಳಿದರು.
ಮುಂದಿನ ಸಿಎಂ ಡಿ.ಕೆ.ಶಿವಕುಮಾರ್. ಅವರಿಗೆ ಸಹಕಾರ ಕೊಡಿ. ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದೇನೆ. ನಾನು ರಾಜೀನಾಮೆಯನ್ನ ಕೊಡುತ್ತಿದ್ದೇನೆ. ಡಿಕೆಶಿ ಮುಖ್ಯಮಂತ್ರಿ ಅಂತ ಹೈಕಮಾಂಡ್ ಅವರು ಹೇಳಿ ಕಳಿಸಿದ್ದಾರೆ. ಹಾಗಾಗಿ ಎಲ್ಲರೂ ಡಿಕೆಶಿಗೆ ಸಹಕಾರ ನೀಡಿ. ಇನ್ನೂ ಎರಡು ವರ್ಷ ಸರ್ಕಾರ ಇರಲಿದೆ. ಎಲ್ಲರ ಸಹಕಾರದಿಂದ ಮತ್ತೆ ಅಧಿಕಾರಕ್ಕೆ ತರೋಣ. ಯಾರು ಅನ್ಯತಾ ಭಾವಿಸಬೇಡಿ. ನಾನು ನನ್ನ ನಿರ್ಧಾರವನ್ನ ತಿಳಿಸಿದ್ದೇನೆ. ಹೈಕಮಾಂಡ್ ಹೇಳಿದ್ದಕ್ಕೆ ನಾನು ಬದ್ಧನಾಗಿದ್ದೇನೆ. ಅವರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಯಾರು ಬೇರೆ ರೀತಿ ಅಪಾರ್ಥ ಮಾಡುವುದು ಬೇಡ. ಪಕ್ಷಕ್ಕಾಗಿ ಎಲ್ಲರ ಸಹಕಾರ ಇರಲಿ ಎಂದು ಸಚಿವರ ಮುಂದೆ ಸಿಎಂ ಮುಕ್ತವಾಗಿ ಮಾತನಾಡಿದರು.