ನವದೆಹಲಿ, ಮೇ. 27 (DaijiworldNews/AK): ದೇಶದಲ್ಲಿ ಸದ್ಯಕ್ಕೆ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿ ಉತ್ತಮವಾಗಿದೆ. ಜನರು ಆತಂಕದಿಂದ ಹೆಚ್ಚುವರಿ ಇಂಧನ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿಲ್ಲ. ದೇಶದಲ್ಲಿ ಬೇಕಾದಷ್ಟು ಇಂಧನದ ಸಂಗ್ರಹವಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಸಿದ್ಧತೆ ಹಾಗೂ ಪ್ರತಿಕ್ರಿಯಾ ಕ್ರಮಗಳ ಕುರಿತು ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿಯು ನವದೆಹಲಿಯ ಕರ್ತವ್ಯ ಭವನದಲ್ಲಿ ಇಂದು ಸಭೆ ನಡೆಸಿತು.
ಈ ಸಭೆಯಲ್ಲಿ ಜೆ.ಪಿ. ನಡ್ಡಾ, ಹರ್ದೀಪ್ ಸಿಂಗ್ ಪುರಿ, ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗವಹಿಸಿದ್ದರು. ಈ ವೇಳೆ ದೇಶದಲ್ಲಿ ಸದ್ಯಕ್ಕೆ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿ ಉತ್ತಮವಾಗಿದೆ. ಜನರು ಆತಂಕದಿಂದ ಹೆಚ್ಚುವರಿ ಇಂಧನ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿಲ್ಲ. ದೇಶದಲ್ಲಿ ಬೇಕಾದಷ್ಟು ಇಂಧನದ ಸಂಗ್ರಹವಿದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ತೈಲ ಶುದ್ಧೀಕರಣ ದೇಶವಾಗಿದ್ದು, ವಾರ್ಷಿಕ 258.1 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ದೇಶದ ಬಳಕೆಗಿಂತಲೂ ನಮ್ಮ ಸಾಮರ್ಥ್ಯ ಹೆಚ್ಚಾಗಿದ್ದು, ವಾರ್ಷಿಕ 61.5 ಮೆಟ್ರಿಕ್ ಟನ್ ತೈಲ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಸಭೆಯ ಬಳಿಕ ತಿಳಿಸಲಾಗಿದೆ.
ಜಾಗತಿಕವಾಗಿ ತೈಲ ಬೆಲೆ ಹೆಚ್ಚಾಗಿದ್ದರೂ, ಅದರ ಭಾರ ಸಾಮಾನ್ಯ ಗ್ರಾಹಕರ ಮೇಲೆ ಬೀಳದಂತೆ ತಡೆಯಲು ಸಾರ್ವಜನಿಕ ವಲಯದ ತೈಲ ಕಂಪನಿಗಳು ದಿನಕ್ಕೆ ಸುಮಾರು 550 ಕೋಟಿ ರೂ.ಗಳ ನಷ್ಟವನ್ನು ತಾವೇ ಭರಿಸುತ್ತಿವೆ. ಆದರೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆಯ ಡೀಸೆಲ್ ಬೆಲೆಗಳು ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಇರಲಿವೆ. ಕೆಲವರು ವಾಣಿಜ್ಯ ಬಳಕೆಗೆ ಚಿಲ್ಲರೆ ಮಾರಾಟದ ಅಗ್ಗದ ಡೀಸೆಲ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಮತ್ತು ಕಾಳಸಂತೆಯಲ್ಲಿ ಮಾರುತ್ತಿರುವುದು ಕಂಡುಬಂದಿದ್ದು, ಇಂತಹ ವಂಚನೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.