ಬೆಂಗಳೂರು, ಮೇ. 27 (DaijiworldNews/AK): ಕಳೆದ 9 ವರ್ಷಗಳಿಂದ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಜಾತಿಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ.

ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕೊಠಡಿಯಲ್ಲಿ ವರದಿ ಸ್ವೀಕರಿಸಿದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್ ನಾಯ್ಕ್, ಆಯೋಗದ ಸದಸ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ಸಿಎಂಗೆ ವರದಿ ಸಲ್ಲಿಸಿದರು.
ಮುಸ್ಲಿಮರು 75 ರಿಂದ 80 ಲಕ್ಷ ಜನಸಂಖ್ಯೆಯೊಂದಿಗೆ ಕರ್ನಾಟಕದಲ್ಲಿ ನಂಬರ್ ಒನ್ ಪ್ರಬಲ ಸಮುದಾಯವಾಗಿದೆ. ವೀರಶೈವ ಲಿಂಗಾಯತ ಶೇ.11ರಷ್ಟು 60 ರಿಂದ 65 ಲಕ್ಷ ಜನಸಂಖ್ಯೆ ಹೊಂದಿದ್ದು ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿದ್ದರೆ, ಶೇ.10ರೊಂದಿಗೆ ಒಕ್ಕಲಿಗರು 55 ರಿಂದ 60 ಲಕ್ಷ ಜನಸಂಖ್ಯೆ ಹೊಂದಿದ 3ನೇ ಸಮುದಾಯವಾಗಿದೆ. ಇನ್ನು ಕುರುಬರು ಸಮುದಾಯ ಶೇ.8ರಷ್ಟು ಇದ್ದು, 40 ರಿಂದ 45 ಲಕ್ಷ ಜನಸಂಖ್ಯೆ ಹೊಂದಿಗೆ ರಾಜ್ಯದ 4ನೇ ದೊಡ್ಡ ಸಮುದಾಯವಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಜಾತಿವಾರು ಜನಸಂಖ್ಯೆ ಬಗ್ಗೆ ಉಲ್ಲೇಖವಾಗಿದೆ.
ವರದಿ ಸ್ವೀಕಾರ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ.ಮಹದೇವಪ್ಪ, ಎಂ.ಸಿ.ಸುಧಾಕರ್, ಸತೀಶ್ ಜಾರಕಿಹೊಳಿ, ಚಲುರಾಯಸ್ವಾಮಿ, ಶಾಸಕರಾದ ಕೋನರೆಡ್ಡಿ, ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್ ನಾಯ್ಕ್, ಸದಸ್ಯರಾದ ಶಿವಣ್ಣಗೌಡ, ಚಂದ್ರಪ್ಪ ಯಾದವ, ಪ್ರತಿಭಾ ಕುಳಾಯಿ, ಡಾ. ಸಿ.ಎಂ.ಕುಂದಗೋಳ, ಡಾ. ಜಿ.ಎನ್.ಶ್ರೀಕಂಠಯ್ಯ ಹಾಗೂ ಸದಸ್ಯ ಕಾರ್ಯದರ್ಶಿ ದಯಾನಂದ್, ಆಡಳಿತಾತ್ಮಕ ಕಾರ್ಯದರ್ಶಿ ಊರ್ಮಿಳಾ ಬಿ, ಡಿ.ಎನ್.ನಾಯಕ್ ಆಯೋಗದ ವಿಶೇಷ ಸಲಹೆಗಾರರು ಮತ್ತು ಇತರೆ ತಜ್ಞರು ಉಪಸ್ಥಿತರಿದ್ದರು.