ಮೈಸೂರು, ಮೇ. 27 (DaijiworldNews/AK): ರಾಜ್ಯದಲ್ಲಿ ಇರುವ ಸಿದ್ದರಾಮಯ್ಯನವರ ಕಾಂಗ್ರೆಸ್ಸಿನ ಸರ್ಕಾರ ಸಂಪೂರ್ಣವಾಗಿ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಕೇವಲ ಐದು ಗ್ಯಾರಂಟಿಗಳ ಹೆಸರಿನಲ್ಲಿ ಐದು ವರ್ಷ ಕಳೆಯಬೇಕು ಅಂತಿದ್ದರು. ಅದು ಮೂರು ವರ್ಷಕ್ಕೆ ಮುಕ್ತಾಯ ಆಗುವ ಹಾಗೆ ಕಾಣುತ್ತಿದೆ. ಗ್ಯಾರಂಟಿಗಳು ಕೊಟ್ಟ ಮಾತಿನಂತೆ ನಡೆದಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಪ್ರಶಿಕ್ಷಣ ವರ್ಗದ ಕಾರ್ಯ ನಿಮಿತ್ತ ಇಲ್ಲಿಗೆ ಬಂದಿದ್ದಾಗಿ ವಿವರಿಸಿದರು. ಕೊಟ್ಟ ಮಾತಿನಂತೆ ನಡೆದುದಾಗಿ ಇವರು ಹೇಳಿಕೊಳ್ಳುತ್ತಾರೆ ಎಂದು ಆಕ್ಷೇಪಿಸಿದರು. ಗ್ಯಾರಂಟಿ ಯಾವ ದಾರಿಯಲ್ಲಿ ಹೋಗಿದೆ ಎಂದು ಗೊತ್ತಾಗುತ್ತಿಲ್ಲ. ಸಚಿವರು ಸದನದಲ್ಲಿ ಸಿಲುಕಿ ಹಾಕಿಕೊಂಡು ಗ್ಯಾರಂಟಿ ಹಣ ಕೊಟ್ಟಿದ್ದಾಗಿ ಸವಾಲು ಹಾಕಿದ್ದರು. ದಾಖಲೆ ಬಿಡುಗಡೆ ಮಾಡಿದ ಬಳಿಕ ಕಣ್ಣೀರು ಹಾಕಿದರು ಎಂದು ವಿವರಿಸಿದರು.
ಅದಿನ್ನೂ ಕಣ್ಣೀರಿನಲ್ಲೇ ಇದೆಯೇ ಹೊರತು ಜನರಿಗೆ ಹಣ ತಲುಪಿಲ್ಲ ಎಂದು ಹೇಳಿದರು.
ಮೋದಿಜೀ ಅವರು 5 ಕೆಜಿ ಪಡಿತರ ಕೊಡುತ್ತಿದ್ದರು. 10 ಕೆಜಿ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರ ಸರಕಾರ, ಬಳಿಕ 170 ರೂ. ಕೊಟ್ಟಿತ್ತು. ಅದು ಕೆಲವರಿಗೆ ಸಿಕ್ಕಿತ್ತು. ಈಗ ಇಂದಿರಾ ಕಿಟ್ ಕೊಡುವುದಾಗಿ ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪಡಿತರ ವಿಚಾರವಾಗಿ ಪ್ರಶ್ನಿಸಿದರೆ ಮುನಿಯಪ್ಪನವರು ಮಾಧ್ಯಮದವರನ್ನೇ ಗದರಿಸುತ್ತಾರೆ ಎಂದು ಆಕ್ಷೇಪಿಸಿದರು. ಈ ಸರಕಾರದ, ಸಚಿವರ ದುರಹಂಕಾರವನ್ನು ಜನರು ಯಾವ ರೀತಿ ಸಹಿಸಿಕೊಂಡು ಕುಳಿತಿದ್ದಾರೆಂಬುದು ಅರ್ಥವಾಗುತ್ತಿಲ್ಲ ಎಂದು ನುಡಿದರು. ಕೇಳುವುದು ಪ್ರತಿಯೊಬ್ಬರ ಹಕ್ಕು. ಅಧಿಕಾರದಲ್ಲಿ ಇರುವವರು ಮಹಾರಾಜರಲ್ಲ; ಪ್ರಶ್ನೆ ಮಾಡಬಾರದು ಎಂದಿಲ್ಲ ಎಂದು ತಿಳಿಸಿದರು.