ಬೆಂಗಳೂರು, ಮೇ. 27 (DaijiworldNews/AA): ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ಲ್ಯಾಬ್ ರಿಪೋರ್ಟ್ನಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ಉಗಾಂಡದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರಲ್ಲಿ ಎಬೋಲಾ ವೈರಸ್ನ ರೋಗಲಕ್ಷಣಗಳು ಕಂಡುಬಂದಿತ್ತು. ಈ ಹಿನ್ನೆಲೆ ಮಹಿಳೆಯನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ ಮಹಿಳೆಯ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ರವಾನಿಸಲಾಗಿತ್ತು.
ಇದೀಗ ಲ್ಯಾಬ್ ರಿಪೋರ್ಟ್ ಬಂದಿದ್ದು, ರಿಪೋರ್ಟ್ನಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ. ಆ ಮಹಿಳೆಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಆರೋಗ್ಯ ಇಲಾಖೆಯ ತಜ್ಞ ವೈದ್ಯರು ಖಚಿತಪಡಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.