ನವದೆಹಲಿ, ಮೇ. 26 (DaijiworldNews/AA): 2017ರಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಹರಿಯಾಣದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ 16ನೇ ಬಾರಿಗೆ 30 ದಿನಗಳ ಅವಧಿಗೆ ಪೆರೋಲ್ ಮಂಜೂರಾಗಿದ್ದು, ಮಂಗಳವಾರ ಬೆಳಗ್ಗೆ ಹರಿಯಾಣದ ರೋಹ್ತಕ್ನ ಸುನಾರಿಯಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

2017ರಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಜೈಲಿನಿಂದ ಹೊರಬರುತ್ತಿರುವುದು ಇದು 16ನೇ ಬಾರಿಯಾಗಿದೆ. 30 ದಿನಗಳ ಅವಧಿಗೆ ಪೆರೋಲ್ ನೀಡಲಾಗಿದೆ. ಪೆರೋಲ್ ಅವಧಿಯಲ್ಲಿ ರಾಮ್ ರಹೀಮ್ ಸಿರ್ಸಾದಲ್ಲಿರುವ ಡೆರಾ ಸಚ್ಚಾ ಸೌದಾ ಮುಖ್ಯ ಕಚೇರಿಯಲ್ಲಿ ತಂಗಲಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ರಹೀಂಗೆ 2017ರಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2019ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲೂ ರಾಮ್ ರಹೀಮ್ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.