ಬೆಂಗಳೂರು, ಮೇ. 26 (DaijiworldNews/AA): ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಾಗಿ ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಅತ್ಯಾಧುನಿಕ ಮಾದರಿಯ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮೇ 25ರಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ಈ ಮೂಲಕ ಸಾರ್ವಜನಿಕರಿಗೆ ಇನ್ನು ಮುಂದೆ ತುರ್ತು ಆರೋಗ್ಯ ಸೇವೆಗಳು ಅತ್ಯಂತ ಸುಲಭವಾಗಿ ಮತ್ತು ತ್ವರಿತವಾಗಿ ಲಭ್ಯವಾಗಲಿವೆ.

ಈ 'ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್' ಅನ್ನು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿದೆ. 'ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ' ಎಂಬ ಧ್ಯೇಯವಾಕ್ಯದೊಂದಿಗೆ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.
ಈ ನೂತನ ಕಮಾಂಡ್ ಸೆಂಟರ್ ಸಾರ್ವಜನಿಕರತುರ್ತು ಅಗತ್ಯಗಳಿಗೆ ಒಂದೇ ಕಂಟ್ರೋಲ್ ರೂಂ ಮೂಲಕ ತಕ್ಷಣ ಸ್ಪಂದಿಸಲಿದೆ. ಗಂಭೀರ ಹಾಗೂ ಸಾಮಾನ್ಯ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಮತ್ತು ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಕಾರ್ಯಾಚರಣೆಯನ್ನು ಇದು ನಿಯಂತ್ರಿಸಲಿದೆ. ಅಪಘಾತದ ಪ್ರಕರಣಗಳು, ಗರ್ಭಿಣಿಯರ ಆರೈಕೆ ಮತ್ತು ತೀವ್ರ ನಿಗಾ ಅಗತ್ಯವಿರುವ ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಉನ್ನತ ಆರೋಗ್ಯ ಸಂಸ್ಥೆಗೆ ಸುರಕ್ಷಿತವಾಗಿ ರವಾನಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.
ಆ್ಯಂಬುಲೆನ್ಸ್ ಸಿಗದೆ ರೋಗಿಗಳು ಪರದಾಡುವ ಸ್ಥಿತಿಗೆ ಮುಕ್ತಿಹಾಡಲು ಮುಂದಾಗಿರುವ ರಾಜ್ಯ ಸರ್ಕಾರ, 108 ಆರೋಗ್ಯ ಕವಚ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿದೆ. ಒಂದೇ ಸೂರಿನಡಿ ರಾಜ್ಯದ ಎಲ್ಲಾ ಪ್ರಮುಖ ತುರ್ತು ಸಹಾಯವಾಣಿಗಳು ಲಭ್ಯವಾಗಲಿವೆ.