ಯಮುನಾನಗರ, ಮೇ. 26 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ತರಬೇತಿ ಕೇಂದ್ರಗಳಿಗೆ ತೆರಳದೇ ಉತ್ತೀರ್ಣರಾದ ಕಶಿಶ್ ಕಲ್ರಾ ಅವರ ಯಶೋಗಾಥೆ ಇದು.

ಕಶಿಶ್ ಕಲ್ರಾ ಅವರು ಅಗ್ನಿಶಾಮಕ ದಳದ ಅಧಿಕಾರಿ ಗುಲ್ಶನ್ ಕಲ್ರಾ ಅವರ ಪುತ್ರಿ. ಕಶಿಶ್ ಅವರು ಯಮುನಾನಗರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ತೆರಳಿದ ಅವರು, ಅಲ್ಲಿ 12ನೇ ತರಗತಿ ಮುಗಿಸಿ, ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಲೇಡಿ ಶ್ರೀರಾಮ್ ಕಾಲೇಜಿನಿಂದ ಪದವಿ ಪಡೆದರು.
ಕಶಿಶ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರಿಖ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. 2025ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 111ನೇ ಅಖಿಲ ಭಾರತ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗುತ್ತಾರೆ.
ತಮ್ಮ ಯಶಸ್ಸಿಗೆ ನಿರಂತರ ಪರಿಶ್ರಮ ಮತ್ತು ಪಠ್ಯಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಕಾರಣ. ತಾವು ಯಾವುದೇ ವಿಶೇಷ ಅಧ್ಯಯನ ಸಾಮಗ್ರಿಗಳನ್ನು ಅವಲಂಬಿಸಿಲ್ಲ, ಕೇವಲ ತಮ್ಮ ಶಿಕ್ಷಕರ ಮಾರ್ಗದರ್ಶನವನ್ನು ಅನುಸರಿಸಿದ್ದಾಗಿ ಕಶಿಶ್ ಅವರು ತಿಳಿಸಿದ್ದಾರೆ.