ಬೆಂಗಳೂರು, ಮೇ. 25 (DaijiworldNews/AA): ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ ಲಾಭ ಇಲ್ಲ, ಲಾಭ ಇರೋದು ರಾಜ್ಯಕ್ಕೆ. ಸಿದ್ದರಾಮಯ್ಯ ತೈಲ ದರ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಮರ್ಥಿಸಿಕೊಂಡಿದ್ದಾರೆ.

10 ದಿನಗಳಲ್ಲಿ 4ನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿದ್ದರಾಮಯ್ಯ ವ್ಯಾಟ್ ಕಡಿಮೆ ಮಾಡದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬೇಡ. ವ್ಯಾಟ್ ಕಡಿಮೆ ಮಾಡಿದರೆ ದೆಹಲಿ, ಗುಜರಾತ್ ದರಕ್ಕೆ ಪೆಟ್ರೋಲ್, ಡೀಸೆಲ್ ಸಿಗುತ್ತದೆ" ಎಂದು ಹೇಳಿದ್ದಾರೆ.
"ಹಲವು ದೇಶಗಳು ತೈಲ ಬಳಕೆಯ ವಿಚಾರದಲ್ಲಿ ನಿರ್ಬಂಧ ವಿಧಿಸಿವೆ. ಆದರೆ ಇಲ್ಲಿ ಮೋದಿಯವರು ಹಾಗೆ ಮಾಡಿಲ್ಲ. ಸಿದ್ದರಾಮಯ್ಯನವರು ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆ. ಗುಜರಾತ್, ಹರಿಯಾಣ, ದೆಹಲಿಯಲ್ಲಿ ಪೆಟ್ರೋಲ್ ದರ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ವ್ಯಾಟ್ ಹೆಚ್ಚು ಮಾಡಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ತೈಲದ ಮೇಲಿನ ವ್ಯಾಟ್ನಿಂದ ರಾಜ್ಯಕ್ಕೆ 6,000 ಕೋಟಿ ರೂ. ಆದಾಯ ಬರುತ್ತಿದೆ. ಅದರ ದರ ಇಳಿಸಲಿ. ಸಿದ್ದರಾಮಯ್ಯ, ಸುರ್ಜೇವಾಲ ಕಡಿದು ಕಟ್ಟೆ ಹಾಕುತ್ತೇವೆ. ಬಾಗಿಲು ಹಾಕುತ್ತೇವೆ ಅಂದರೆ ಆಗಲ್ಲ. ತಾಕತ್ ಇದ್ದರೆ ರಾಜ್ಯ ಸರ್ಕಾರ ವ್ಯಾಟ್ ಇಳಿಸಲಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಯುದ್ಧದ ಪರಿಣಾಮ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಸಾಮಾನ್ಯ ದಿನಗಳು, ಯುದ್ಧದ ದಿನಗಳು ಒಂದೇ ಅಲ್ಲ. ಕಾಂಗ್ರೆಸ್ನವರಿಗೆ ಈ ಕಾಮನ್ ಸೆನ್ಸ್ ಇಲ್ಲ. ಕಾಂಗ್ರೆಸ್ ಹಾಗೂ ಕಾಕ್ರೋಚ್ ಪಕ್ಷಗಳು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿವೆ. ಇವೆರಡು ಪಕ್ಷಗಳು ಪಾಕಿಸ್ತಾನದ ಟೂಲ್ ಕಿಟ್, ದೇಶವಿಭಜನೆಯ ಟೂಲ್ ಕಿಟ್, ದೇಶದ್ರೋಹದ ಟೂಲ್ ಕಿಟ್" ಎಂದು ವಾಗ್ದಾಳಿ ನಡೆಸಿದ್ದಾರೆ.