ಬೆಂಗಳೂರು, ಮೇ. 25 (DaijiworldNews/AA): ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ ಎಂಬ ಘೋಷವಾಕ್ಯದಡಿಯಲ್ಲಿ 108 ಆಂಬುಲೆನ್ಸ್ ಸೇವೆ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದ್ದು, ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

108 ಆರೋಗ್ಯ ಕವಚ ಆಂಬುಲೆನ್ಸ್ ಕಮಾಂಡ್ ಕಂಟ್ರೋಲ್ ಸೆಂಟರ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸಿಎಂ ಸಿದ್ಧರಾಮಯ್ಯ ಅವರ ಬೆಂಬಲ, ಪ್ರೋತ್ಸಾಹದೊಂದಿಗೆ ಈ ಯೋಜನೆ ಜಾರಿಗೆ ಬಂದಿದೆ. 2008ರಲ್ಲಿ ಜನರ ಅನುಕೂಲಕ್ಕಾಗಿ 108 ಆಂಬುಲೆನ್ಸ್ ಸೇವೆ ಪ್ರಾರಂಭಿಸಲಾಗಿತ್ತು. ಈವರೆಗೆ ಖಾಸಗಿ ಸಂಸ್ಥೆ ಇದನ್ನು ನಡೆಸುತ್ತಿತ್ತು. 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಇದನ್ನು ಉನ್ನತೀಕರಣ ಮಾಡಲಾಗುವುದು ಎಂದು ಹೇಳಿದ್ದರು. ಇದೀಗ ಸರ್ಕಾರವೇ ಇದನ್ನು ನಡೆಸಬೇಕು. ಅತ್ಯಾಧುನಿಕ ವ್ಯವಸ್ಥೆ ಅಳವಡಿಸಬೇಕು ಎಂದು ತೀರ್ಮಾನಿಸಿ, ಈ ನಿರ್ಧಾರ ಕೈಗೊಂಡಿದೆ" ಎಂದು ಹೇಳಿದರು.
"ಸರ್ಕಾರ ಹಲವಾರು ಮಾಡೆಲ್ ಹಾಗೂ ಸಿಂಗಪೂರ್ ದೇಶದ ವ್ಯವಸ್ಥೆಯನ್ನೂ ಸಹ ಅಧ್ಯಯನ ಮಾಡಿ, ಸುಸಜ್ಜಿತಗೊಳಿಸಲು ಕಾರ್ಯೋನ್ಮುಖವಾಗಿದೆ. ಈ ವ್ಯವಸ್ಥೆಯನ್ನು ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆ ಇದಕ್ಕೆ ಬೇಕಾದ ಸಾಫ್ಟ್ವೇರ್ ಸಿದ್ಧಪಡಿಸಿದೆ. ಸುಸಜ್ಜಿತ 24/7 ಕಮಾಂಡ್ ಕಂಟ್ರೋಲ್ ರೂಂ ಕೆಲಸ ಮಾಡುತ್ತಿದೆ. ಈಗಿನ ಸುಧಾರಿತ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಟ್ರಾಕಿಂಗ್ ವ್ಯವಸ್ಥೆ ಇದೆ. ಆಂಬುಲೆನ್ಸ್ನಿಂದಲೇ ಒಆಖಿ ಸಾಧನದ ಮೂಲಕ ತುರ್ತು ಸಂದರ್ಭದಲ್ಲಿ ವೈದ್ಯರನ್ನು ಸಂಪಕಿಸಬಹುದು. ಆಸ್ಪತ್ರೆಗೂ ಸಂದೇಶ ನೀಡಿ, ಸಕಲ ಸಿದ್ಧತೆ ಮಾಡಲು ಸಾಧ್ಯ. ಅಲ್ಲದೇ ರೋಗಿಯ ಸ್ಥಿತಿಯನ್ನು ಆಧರಿಸಿ ಯಾವ ಆಸ್ಪತ್ರೆ ಸೂಕ್ತ ಎಂದು ಅಲ್ಲಿಗೇ ಕಳುಹಿಸಲು ಸಾಧ್ಯ, ಫ್ಯೂಯಲ್ ಗೇಜ್ ಅಳವಡಿಸಿರುವುದರಿಂದ ಇಂಧನ ಬಳಕೆ ಮಾನಿಟರ್ ಮಾಡಲಾಗುವುದು" ಎಂದು ವಿವರಿಸಿದರು.