ಚೆನ್ನೈ, ಮೇ. 25 (DaijiworldNews/AA): ಎಐಎಡಿಎಂಕೆ ಪಕ್ಷದ ಎಸ್ ಪಿ ವೇಲುಮಣಿ ಮತ್ತು ಸಿ.ವಿ ಷಣ್ಮುಗಂ ಬಣದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದು, ಟಿವಿಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮರಗತಂ ಕುಮಾರ್ವೇಲ್ (ಮಧುರಾಂತಕಂ ಕ್ಷೇತ್ರ), ಜಯಕುಮಾರ್ (ಪೆರುಂದುರೈ ಕ್ಷೇತ್ರ), ಸತ್ಯಭಾಮಾ (ಧಾರಾಪುರಂ ಕ್ಷೇತ್ರ) ಅವರು ರಾಜೀನಾಮೆ ನೀಡಿದ್ದಾರೆ. ಈ ಮೂವರು ಶಾಸಕರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜೀನಾಮೆ ನೀಡಿರುವ ಈ ಮೂವರು ಶಾಸಕರು ಸಚಿವ ಆಧವ್ ಅರ್ಜುನ್ ಅವರನ್ನು ಭೇಟಿಯಾಗಿ ಟಿವಿಕೆ ಪಕ್ಷಕ್ಕೆ ಸೇರಿದ್ದಾರೆ. ಈ ಮೊದಲೆ ಸಿಎಂ ವಿಜಯ್ ರಾಜೀನಾಮೆ ನಂತರ ತಿರುಚ್ಚಿ ಪೂರ್ವ ಕ್ಷೇತ್ರ ಖಾಲಿಯಾಗಿತ್ತು. ಈ ಮೂವರು ಶಾಸಕರ ರಾಜೀನಾಮೆಯಿಂದ ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು ನಾಲ್ಕು ಸ್ಥಾನಗಳು ಖಾಲಿಯಾಗಿವೆ.