ನವದೆಹಲಿ, ಮೇ. 24 (DaijiworldNews/AK):ಆಫ್ರಿಕಾ ದೇಶಗಳಲ್ಲಿ ಹರಡುತ್ತಿರುವ ಭೀಕರ ಎಬೋಲಾಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ನಮ್ಮ ದೇಶದ ನಾಗರಿಕರಿಗೆ ಅತ್ಯಂತ ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕಾಂಗೋ , ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಅನಗತ್ಯವಾಗಿ ಪ್ರಯಾಣಿಸಬೇಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಭಾರತೀಯರಿಗೆ ಸೂಚಿಸಿದೆ.ಇತ್ತೀಚೆಗೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ ದೇಶಗಳಲ್ಲಿ ಎಬೋಲಾ ವೈರಸ್ನ ಅತ್ಯಂತ ಅಪರೂಪದ ಹಾಗೂ ಅಪಾಯಕಾರಿ ತಳಿಯಾದ ‘ಬುಂಡಿಬುಗ್ಯೊ’ ಭಾರಿ ಪ್ರಮಾಣದಲ್ಲಿ ಹರಡುತ್ತಿದೆ. ಈಗಾಗಲೇ ಅಲ್ಲಿ ನೂರಾರು ಜನರು ಈ ರೋಗಕ್ಕೆ ತುತ್ತಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ಅಂತಾರಾಷ್ಟ್ರೀಯ ಆತಂಕದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ಎಂದು ಘೋಷಿಸಿದೆ.
ಕಾಂಗೋ ಮತ್ತು ಉಗಾಂಡಾದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಸುಡಾನ್ ದೇಶಕ್ಕೂ ಈ ರೋಗ ಹರಡುವ ಭಾರಿ ಅಪಾಯ ಇರುವುದರಿಂದ ಈ ಮೂರೂ ದೇಶಗಳನ್ನು ‘ಹೆಚ್ಚಿನ ಅಪಾಯವಿರುವ ವಲಯ’ ಎಂದು ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದಿಂದ ಪ್ರಮುಖ ಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಹೊರಡಿಸಿರುವ ಮಾರ್ಗಸೂಚಿಗಳು ಹೀಗಿವೆ:
*ಮುಂದಿನ ಆದೇಶದವರೆಗೆ ಭಾರತೀಯ ನಾಗರಿಕರು ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಯಾವುದೇ ತುರ್ತು ಕೆಲಸವಿಲ್ಲದಿದ್ದರೆ ಪ್ರಯಾಣಿಸುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು.
*ಪ್ರಸ್ತುತ ಆ ದೇಶಗಳಲ್ಲಿ ವಾಸಿಸುತ್ತಿರುವ ಅಥವಾ ಈಗಾಗಲೇ ಅಲ್ಲಿಗೆ ಪ್ರಯಾಣಿಸಿರುವ ಭಾರತೀಯರು ಅಲ್ಲಿನ ಸ್ಥಳೀಯ ಆರೋಗ್ಯ ಇಲಾಖೆ ನೀಡಿರುವ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
*ಸೋಂಕಿತ ದೇಶಗಳಿಂದ ಭಾರತದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಿಗೆ ಆಗಮಿಸುವ ಅಥವಾ ಅಲ್ಲಿಂದ ಟ್ರಾನ್ಸಿಟ್ ಮೂಲಕ ಬರುವ ಪ್ರತಿಯೊಬ್ಬ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ.
ದೆಹಲಿ, ಕೊಚ್ಚಿ, ಹೈದರಾಬಾದ್ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸ್ಕ್ರೀನಿಂಗ್ ಅನ್ನು ತೀವ್ರಗೊಳಿಸಲಾಗಿದೆ. ಪ್ರಯಾಣಿಕರು ಭಾರತಕ್ಕೆ ಬಂದಿಳಿಯುವ ಮುನ್ನವೇ ವಿಮಾನದಲ್ಲಿ ಸ್ವಯಂ-ಘೋಷಣಾ ಪತ್ರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಮತ್ತು ದೇಶದ ಜನರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.