ಕೋಲ್ಕತ್ತಾ, ಮೇ. 24 (DaijiworldNews/AA): ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿಯ ಅಭ್ಯರ್ಥಿ ದೇಬಾಂಶು ಪಾಂಡಾ ಅವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಭಾರಿ ಮುನ್ನಡೆ ಸಾಧಿಸಿದ್ದಾರೆ.

ಸದ್ಯದ ಟ್ರೆಂಡ್ಗಳ ಪ್ರಕಾರ ದೇಬಾಂಶು ಪಾಂಡಾ ಅವರು ಸುಮಾರು 31 ಸಾವಿರ ಮತಗಳ ಬೃಹತ್ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಒಟ್ಟು 21 ಸುತ್ತುಗಳ ಮತ ಎಣಿಕೆ ನಡೆಯಬೇಕಾಗಿದ್ದು ಬೆಳಗ್ಗೆ 11:45ಕ್ಕೆ 8 ಸುತ್ತುಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ದೇಬಾಂಶು ಪಾಂಡಾ 51,621 ಮತಗಳನ್ನು ಪಡೆದರೆ ಸಿಪಿಎಂನ ಶಂಭು ನಾಥ್ ಕುರ್ಮಿ 20,556 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ನ ಅಬ್ದುರ್ ರಜಾಕ್ ಮೊಲ್ಲಾ 5,205, ಟಿಎಂಸಿಯ ಜಹಾಂಗೀರ್ ಖಾನ್ 2,570 ಮತಗಳನ್ನು ಪಡೆದಿದ್ದಾರೆ.
ಕಳೆದ ಏಪ್ರಿಲ್ 29ರಂದು ಈ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ನಡೆದಿತ್ತು. ಆದರೆ ಆ ಸಮಯದಲ್ಲಿ ಇವಿಎಂ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮೇ 21 ರಂದು ಮರುಮತದಾನ ನಡೆಸಲಾಗಿತ್ತು.