ನವದೆಹಲಿ, ಮೇ. 23 (DaijiworldNews/AA): 10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಆದ್ರೆ ಹಲವಾರು ದೇಶಗಳಿಗೆ ಹೋಲಿಸಿದ್ರೆ, ಬೆಲೆ ಏರಿಕೆ ಭಾರತದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಕಚ್ಚಾ ತೈಲದ ವೆಚ್ಚಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾದ ಅಡಚಣೆಗಳ ಹೊರತಾಗಿಯೂ ಚಿಲ್ಲರೆ ಇಂಧನ ಬೆಲೆ ಏರಿಕೆ ಮಾಡದೇ 76 ದಿನಗಳ ಕಾಲ ಒತ್ತಡ ತಡೆದುಕೊಂಡಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಮೇ 15, 19 ಮತ್ತು 23 ರಂದು ಮೂರು ಬಾರಿ ಹಂತ-ಹಂತವಾಗಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಮೂರು ಹಂತಗಳಲ್ಲಿ ಒಟ್ಟು 4.74 ರೂ. ನಿಂದ 4.82 ರೂ. ವರೆಗೆ ಬೆಲೆ ಏರಿಕೆಯಾಗಿದೆ. ಜಾಗತಿಕ ಇಂಧನ ಬಿಕ್ಕಟ್ಟಿನ ಸಂಪೂರ್ಣ ಪರಿಣಾಮದಿಂದ ಭಾರತ ತನ್ನ ಗ್ರಾಹಕರನ್ನ ರಕ್ಷಣೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5% ರಷ್ಟು ಮಾತ್ರ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನದಲ್ಲಿ 54.9%, ಅಮೆರಿಕದಲ್ಲಿ 44.5% ಹಾಗೂ ಯುಕೆ ನಲ್ಲಿ 19.2% ಇಂಧನ ಬೆಲೆಗಳು ಏರಿಕೆಯಾಗಿದೆ. ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಆಗಿರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳ ಮೇಲೆ ಹೊರೆ ಹೆಚ್ಚಾಗಿದೆ. ಭಾರತೀಯ ತೈಲ ಕಂಪನಿಗಳು ಪ್ರತಿದಿನಕ್ಕೆ ಸುಮಾರು 1,000 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿವೆ. ಆದ್ರೆ ಇಂಧನ ದರ ಪರಿಷ್ಕರಣೆಯಿಂದ ಆ ನಷ್ಟ ದಿನಕ್ಕೆ 750 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ವಿಪಕ್ಷಗಳ ಆಡಳಿತ ರಾಜ್ಯಗಳಾದ ತೆಲಂಗಾಣ ಮತ್ತು ಕೇರಳದಂತ ರಾಜ್ಯಗಳಲ್ಲಿ ಹೆಚ್ಚಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಯಿಂದಾಗಿ ಪೆಟ್ರೋಲ್, ಡೀಸೆಲ್ ದರ ಅತ್ಯಂತ ದುಬಾರಿಯಾಗಿದೆ. ಆದ್ರೆ ಬಿಜೆಪಿ ಆಡಳಿತದ ಗುಜರಾತ್, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ, ಗೋವಾ ಮತ್ತು ಅಸ್ಸಾಂನಲ್ಲಿ ದರಗಳು ಕಡಿಮೆಯಿದೆ ಎಂದು ಕೇಂದ್ರ ಹೇಳಿದೆ.
ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕವು ದೇಶಾದ್ಯಂತ ಏಕರೂಪವಾಗಿಯೇ ಇರುತ್ತದೆ. ಆದ್ರೆ ಚಿಲ್ಲರೆ ಇಂಧನ ಬೆಲೆಗಳಲ್ಲಿನ ವ್ಯತ್ಯಾಸ ಮತ್ತು ರಾಜ್ಯಗಳು ವಿಧಿಸುವ ವ್ಯಾಟ್ನಿಂದ ದರ ಹೆಚ್ಚಳ ಕಂಡುಬರುತ್ತಿದೆ. ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟ ಆಡಳಿತ ರಾಜ್ಯಗಳು ವ್ಯಾಟ್ ಕಡಿಮೆ ಮಾಡದೇ ತೆರಿಗೆ ಕಡಿತಗೊಳಿಸುವಂತೆ ಒತ್ತಾಯಿಸುತ್ತಿರುವುದು ದುರದೃಷ್ಟಕರ ಎಂದು ಕೇಂದ್ರ ಸರ್ಕಾರ ವಿಪಕ್ಷಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
2026 ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 10 ರೂ. ಗಳಷ್ಟು ಕಡಿಮೆ ಮಾಡಿತ್ತು. ಡೀಸೆಲ್ ಅಬಕಾರಿ ಸುಂಕವನ್ನು ಶೂನ್ಯಕ್ಕೆ ಇಳಿಸಿತ್ತು. ಇದರಿಂದ ಕೇಂದ್ರದ ಮೇಲೆ 30,000 ಕೋಟಿ ರೂಪಾಯಿ ಹೊರೆ ಹೆಚ್ಚಾದರೂ ಕೇಂದ್ರ ಅದನ್ನು ತಡೆದುಕೊಂಡಿತು. ಆದ್ರೆ ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ಮಾಡಿದ್ದಾದ್ರೂ ಏನು? 2005 & 2010 ರ ಮಧ್ಯೆ ಸುಮಾರು 1.34 ಲಕ್ಷ ಕೋಟಿ ರೂ.ಗಳ ಮೌಲ್ಯದ ತೈಲ ಬಾಂಡ್ಗಳನ್ನು ಬಿಡುಗಡೆ ಮಾಡಿತು. ಪ್ರಸ್ತುತ ಸರ್ಕಾರವು ಈಗಾಗಲೇ ಮೂಲ ಮೊತ್ತದ 1.30 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮರುಪಾವತಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ, ಸಂಸ್ಕರಣಾ ಮಿತಿಯಲ್ಲಿ ಒತ್ತಡ, ಆಮದು ತೆರಿಗೆ ಹೆಚ್ಚಳ ಹಾಗೂ ರೂಪಾಯಿ ಮೌಲ್ಯ ಕುಸಿತದ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ 76 ದಿನಗಳ ವೆರೆಗೆ ಒತ್ತಡ ತಡೆದುಕೊಂಡು ಈಗ ಬೆಲೆ ಏರಿಕೆ ಮಾಡಿದೆ. ಅಷ್ಟೇ ಅಲ್ಲ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಕಚ್ಚಾತೈಲ ಬೆಲೆ ಶೇ.50 ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ ಎಂದು ಬೆಲೆ ಏರಿಕೆಯನ್ನು ಕೇಂದ್ರ ಸಮರ್ಥನೆ ಮಾಡಿಕೊಂಡಿದೆ.