ಪಾಟ್ನಾ, ಮೇ. 23 (DaijiworldNews/TA): ಜನ್ಸೂರಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಉದಯ್ ಸಿಂಗ್ ಸಕ್ರಿಯ ರಾಜಕೀಯದಿಂದ ಒಂದು ವರ್ಷದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದು, ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಪಪ್ಪು ಸಿಂಗ್ ಎಂದೂ ಪರಿಚಿತರಾಗಿರುವ ಉದಯ್ ಸಿಂಗ್, ರಾಜಕೀಯವನ್ನು ಶಾಶ್ವತವಾಗಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಹಾಗೂ ವ್ಯವಹಾರ ಸಂಬಂಧಿತ ಕೆಲವು ಪ್ರಮುಖ ವಿಚಾರಗಳಿಗೆ ಸಮಯ ನೀಡಬೇಕಿರುವುದರಿಂದ ತಾತ್ಕಾಲಿಕವಾಗಿ ಸಕ್ರಿಯ ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಒಂದು ವರ್ಷದ ವಿರಾಮದ ಅವಧಿಯಲ್ಲಿಯೂ ಸಾರ್ವಜನಿಕರ ಸಂಪರ್ಕದಲ್ಲೇ ಇರುತ್ತೇನೆ. ಜನರ ಸಂತೋಷ-ದುಃಖಗಳಲ್ಲಿ ಸದಾ ಭಾಗಿಯಾಗಿರುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ. ಜನ್ಸೂರಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಪಾಟ್ನಾದ ಶೇಖ್ಪುರ ನಿವಾಸ ಖಾಲಿ ಮಾಡುತ್ತಿರುವ ಕುರಿತು ಕೂಡ ಉದಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಸ್ಥಳ ಬದಲಾವಣೆ ರಾಜಕೀಯ ತಂತ್ರದ ಭಾಗವಾಗಿದ್ದು, ಅದನ್ನು ವಿವಾದದ ದೃಷ್ಟಿಯಿಂದ ನೋಡಬಾರದು ಎಂದು ಅವರು ಹೇಳಿದ್ದಾರೆ. ಜನ್ಸೂರಜ್ ಪಕ್ಷ ತನ್ನ ಕಾರ್ಯಚಟುವಟಿಕೆಗಳನ್ನು ಪೂರ್ಣ ಶಕ್ತಿಯೊಂದಿಗೆ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಬಿಹಾರದ ಸೀಮಾಂಚಲ್ ಹಾಗೂ ಪೂರ್ಣಿಯಾ ಭಾಗದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ಉದಯ್ ಸಿಂಗ್, ತಮ್ಮ ರಾಜಕೀಯ ಜೀವನವನ್ನು ಬಿಜೆಪಿಯಿಂದ ಆರಂಭಿಸಿದ್ದರು. 2004 ಮತ್ತು 2009ರಲ್ಲಿ ಪೂರ್ಣಿಯಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ನಂತರ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, 2025ರಲ್ಲಿ ಜನ್ಸೂರಜ್ ಪಕ್ಷ ರಚನೆಯಾದಾಗ ಅದರ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಾಜಕೀಯದ ಜೊತೆಗೆ ಉದಯ್ ಸಿಂಗ್ ಪ್ರಮುಖ ಕೈಗಾರಿಕೋದ್ಯಮಿಯಾಗಿಯೂ ಹೆಸರು ಮಾಡಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ, ಅವರು ರೂ. 370 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಬಿಹಾರದ ಶ್ರೀಮಂತ ರಾಜಕಾರಣಿಗಳ ಪೈಕಿ ಒಬ್ಬರೆಂದು ಪರಿಗಣಿಸಲ್ಪಡುವ ಅವರು, ತಮ್ಮ ವ್ಯವಹಾರ ಹಾಗೂ ವೈಯಕ್ತಿಕ ವಿಚಾರಗಳಿಗೆ ಹೆಚ್ಚಿನ ಸಮಯ ನೀಡಲು ಈ ವಿರಾಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಅವರ ಬೆಂಬಲಿಗರು ಮತ್ತೆ ರಾಜಕೀಯಕ್ಕೆ ಮರಳುವ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.