ನವದೆಹಲಿ, ಮೇ. 23 (DaijiworldNews/AK): ಯುಪಿಎಸ್ ಸಿ ಎಂಬ ಕಠಿಣ ಪಯಣದ ಕೊನೆಯಲ್ಲಿ ಯಶಸ್ಸು ಕಂಡವರಲ್ಲಿ ಹರಿಯಾಣದ ಅಂಬಾಲ ನಿವಾಸಿ ಐಎಎಸ್ ಅಧಿಕಾರಿ ಆಕೃತಿ ಸೇಥಿ ಕೂಡ ಒಬ್ಬರು. ಐದು ವರ್ಷಗಳ ಕಠಿಣ ಪರಿಶ್ರಮದಿಂದ ಅವರಿಗೆ ಯಶಸ್ಸು ಸಿಕ್ಕಿದೆ. ಇವರ ಈ UPSC ಪಯಣದ ಬಗ್ಗೆ ತಿಳಿಯೋಣ.

ಅಂಬಾಲಾ ಕ್ಯಾಂಟ್ ನ ಪ್ರೊಫೆಸರ್ ಕಾಲೋನಿ ಖೋಜಿಪುರದ ನಿವಾಸಿ ಆಕೃತಿ ಸೇಥಿ ಅವರು UPSC 2023 ರಲ್ಲಿ ಅಖಿಲ ಭಾರತ 249 ರ ರ್ಯಾಂಕ್ ಗಳಿಸಿದ್ದರು. ಅವರು ಕ್ಯಾಂಟ್ ನ ಬಿಪಿಎಸ್ ಶಾಲೆಯಲ್ಲಿ 12 ನೇ ತರಗತಿಯವರೆಗೆ ಓದಿದರು. 10 ಮತ್ತು 12ನೇ ತರಗತಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಇದಾದ ನಂತರ ದೆಹಲಿಯ ಫಾರೂಕ್ ಖಾಲ್ಸಾ ಕಾಲೇಜಿನಲ್ಲಿ ಬಿ.ಕಾಂ ಮತ್ತು ಎಂ.ಕಾಂ ಪದವಿಗಳನ್ನು ಪಡೆದರು.
ಬಿಕಾಂ ಮತ್ತು ಎಂಕಾಂ ಮಾಡಿದ ನಂತರ ಆಕೃತಿ ಗುರುಗ್ರಾಮದ ಕಂಪನಿಯೊಂದರಲ್ಲಿ ತಿಂಗಳಿಗೆ 60 ಸಾವಿರ ರೂ. ಸಂಬಳದ ಉದ್ಯೋಗ ಮಾಡುತ್ತಿದ್ದರು. ಆದರೆ ಐಎಎಸ್ ಅಧಿಕಾರಿಯಾಗುವುದು ಅವರ ಗುರಿಯಾಗಿತ್ತು. ಹಾಗಾಗಿ ಅವರು ಕೆಲಸವನ್ನು ಬಿಟ್ಟು UPSC ಗೆ ತಯಾರಿ ಆರಂಭಿಸಿದರು. ಯುಪಿಎಸ್ ಸಿಯಲ್ಲಿ ಯಶಸ್ಸನ್ನು ಸಾಧಿಸುವ ಅವರ ಪ್ರಯಾಣವು ಸುಲಭವಾಗಿರಲಿಲ್ಲ.
2017 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ಇದರ ನಂತರ, 2019 ರಲ್ಲಿ ಮತ್ತೆ ಪ್ರಯತ್ನಿಸಿದರು. ಸತತ ವೈಫಲ್ಯಗಳ ಹೊರತಾಗಿಯೂ, ಆಕೆ ಯುಪಿಎಸ್ ಸಿ ಕೈ ಬಿಡುವ ಯೋಚನೆ ಮಾಡಲಿಲ್ಲ. ಆದರೆ ಖಂಡಿತವಾಗಿಯೂ ಬೇಸರವಾಗಿತ್ತು, ಮಾನಸಿಕವಾಗಿಯೂ ಕುಗ್ಗಿದ್ದರು. ಆಕೃತಿ ಯುಪಿಎಸ್ಸಿ ನಾಗರಿಕ ಸೇವೆಗಳಲ್ಲಿ ಒಂದರ ಹಿಂದೆ ಒಂದರಂತೆ ವೈಫಲ್ಯಗಳನ್ನು ಎದುರಿಸುತ್ತಲೇ ಇದ್ದರು. ಆಕೆ UPSC 2022 ರಲ್ಲಿ ಕೇವಲ 2 ಅಂಕಗಳಿಂದ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರು ಛಲ ಬಿಡಲಿಲ್ಲ. ಅಂತಿಮವಾಗಿ, ಕೊನೆಯ ಮತ್ತು ಆರನೇ ಪ್ರಯತ್ನದಲ್ಲಿ ಅವರು ಅಖಿಲ ಭಾರತ 249 ರ ್ಯಾಂಕ್ ಗಳಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು.