ಭೋಪಾಲ್, ಮೇ. 22 (DaijiworldNews/AK):ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಮೃತಳ ಪತಿ ಸಮರ್ಥ್ ಸಿಂಗ್ ಕೊನೆಗೂ ಪೊಲೀಸ್ ವಶವಾಗಿದ್ದಾನೆ.

ಜಬ್ಬಲ್ಪುರದ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ ಆತನನ್ನು ಪೊಲೀಸರು ಇಂದು ಸಂಜೆ ವಶಕ್ಕೆ ಪಡೆದಿದ್ದಾರೆ. ಗುರುವಾರವಷ್ಟೇ ಭೋಪಾಲ್ ಸೆಷನ್ಸ್ ನ್ಯಾಯಾಲಯವು ಸಮರ್ಥ್ ಸಿಂಗ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ತಕ್ಷಣವೇ ಶರಣಾಗುವಂತೆ ಖಡಕ್ ಸೂಚನೆ ನೀಡಿತ್ತು.
33 ವರ್ಷದ ತ್ವಿಶಾ ಶರ್ಮಾ ಮೇ 12ರಂದು ಭೋಪಾಲ್ನಲ್ಲಿರುವ ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಗಳ ಸಾವಿನಿಂದ ಕಂಗಾಲಾಗಿರುವ ತ್ವಿಶಾ ಕುಟುಂಬಸ್ಥರು, ಇದು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ಪತಿ ಮತ್ತು ಅತ್ತೆಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪತಿ ಹಾಗೂ ಅತ್ತೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಾ, ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಿಂಗ್ ಕುಟುಂಬಸ್ಥರು, “ತ್ವಿಶಾ ಮಾದಕ ವ್ಯಸನಕ್ಕೆ ಒಳಗಾಗಿದ್ದಳು, ಅದೇ ಆಕೆಯ ಸಾವಿಗೆ ಕಾರಣ ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಈ ಸಾವಿನ ಹಿಂದೆ ಹಲವು ಅನುಮಾನಾಸ್ಪದ ಸಂಗತಿಗಳಿವೆ ಎಂದು ತ್ವಿಶಾ ಕುಟುಂಬ ಹಠ ಹಿಡಿದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶ ಹೈಕೋರ್ಟ್ ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದೆ. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅದು ‘ಆತ್ಮಹತ್ಯೆ’ ಎಂದು ಉಲ್ಲೇಖಿಸಲಾಗಿದೆ.
ಪ್ರಕರಣದ ಗಾಂಭೀರತೆಯನ್ನು ಅರಿತ ಮಧ್ಯಪ್ರದೇಶ ಸರ್ಕಾರವು ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ಆದೇಶಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸಿಬಿಐ ಈ ಸಾವಿನ ರಹಸ್ಯವನ್ನು ಭೇದಿಸಲಿದೆ.