ಬೆಂಗಳೂರು ಮೇ. 22 (DaijiworldNews/ AK): ಬಡವರ ಮತಗಳನ್ನು ತೆಗೆಯಲು ಎಸ್ಐಆರ್ ಮೂಲಕ ಸಂಚು ಮಾಡಲಾಗಿದೆ. ನಾವುಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರು, ಬಿಎಲ್ಎಗಳಿಗೆ ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಆದ ಕಾರಣಕ್ಕೆ ಸಭೆ ಕರೆಯಲಾಗುತ್ತಿದೆ. ಏಕೆಂದರೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ.
ಪ್ರತಿಯೊಬ್ಬರೂ ಸಹ ಅರ್ಜಿ ಸಲ್ಲಿಸಬೇಕಿದೆ. ಇಲ್ಲದಿದ್ದರೆ ನಾಗರಿಕರು ತಮ್ಮ ಮತವನ್ನು ಕಳೆದುಕೊಳ್ಳುತ್ತಾರೆ. ಬೇರೆ ರಾಜ್ಯಗಳಲ್ಲಿ ಇದೇ ರೀತಿ ಆಗಿದ್ದನ್ನು ನೋಡಿದ್ದೇವೆ. ಮತದಾನದ ಹಕ್ಕು ಹೋದರೆ ಪಿಂಚಣಿ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಅನೇಕ ಅನುಕೂಲಗಳಿಂದ ನಾಗರಿಕರು ವಂಚಿತರಾಗುತ್ತಾರೆ ಎಂದರು.