ನವದೆಹಲಿ, ಮೇ. 22 (DaijiworldNews/TA): ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇರಾನ್-ಅಮೆರಿಕ ಉದ್ವಿಗ್ನತೆಯ ಪರಿಣಾಮ ದೇಶದ ಜನರ ಮೇಲೆ ಬೀರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರಿಗೆ ಸೂಚಿಸಿದ್ದಾರೆ.

ಐದು ರಾಷ್ಟ್ರಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಬೆನ್ನಲ್ಲೇ ಗುರುವಾರ ಸಂಜೆ ಸೇವಾ ತೀರ್ಥದಲ್ಲಿ ಪ್ರಧಾನಿ ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ಸುದೀರ್ಘ ಸಭೆ ನಡೆಸಿದರು. ಸಭೆಯಲ್ಲಿ ಮಧ್ಯಪ್ರಾಚ್ಯದ ಬಿಕ್ಕಟ್ಟು, ಅದರ ಆರ್ಥಿಕ ಪರಿಣಾಮಗಳು ಹಾಗೂ “ವಿಕಸಿತ ಭಾರತ 2047” ಗುರಿ ಸಾಧನೆ ಕುರಿತಂತೆ ಮಹತ್ವದ ಚರ್ಚೆಗಳು ನಡೆದವು. ನರೇಂದ್ರ ಮೋದಿ ಅವರು, 2047ರೊಳಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವ ಗುರಿಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಚಿವರಿಗೆ ಸೂಚಿಸಿದರು.
“ವಿಕಸಿತ ಭಾರತ ಎನ್ನುವುದು ಕೇವಲ ಘೋಷಣೆಯಾಗಬಾರದು. ಗುರಿ ಸಾಧನೆಗೆ ಬೇಕಾದ ಎಲ್ಲ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು. ಸರ್ಕಾರದ ಮೂರನೇ ಅವಧಿಗೆ ಎರಡು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆ, ಇನ್ನೂ ಬಾಕಿ ಉಳಿದಿರುವ ಕೆಲಸಗಳನ್ನು ಗುರುತಿಸಿ ಮುನ್ನಡೆಸಬೇಕು” ಎಂದು ಪ್ರಧಾನಿ ಹೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ತೈಲ ಆಮದುಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಹುಡುಕಬೇಕು ಹಾಗೂ ಜಾಗತಿಕ ಬಿಕ್ಕಟ್ಟಿನ ಪರಿಣಾಮ ಸಾಮಾನ್ಯ ಜನರ ಮೇಲೆ ಬೀರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಸಭೆಯಲ್ಲಿ ಆರುಕ್ಕೂ ಹೆಚ್ಚು ಸಚಿವಾಲಯಗಳು ಪ್ರಸ್ತುತಿ ನೀಡಿದ್ದು, ಒಂಬತ್ತು ಸಚಿವಾಲಯಗಳು ತಮ್ಮ ಕಾರ್ಯಯೋಜನೆ ಹಾಗೂ ಭವಿಷ್ಯದ ಮಾರ್ಗಸೂಚಿ ಕುರಿತ ವರದಿ ಸಲ್ಲಿಸಿವೆ. ಸಂಪುಟ ಕಾರ್ಯದರ್ಶಿ ಹಾಗೂ ನೀತಿ ಆಯೋಗ ಕೂಡ ಸಭೆಯಲ್ಲಿ ಪ್ರಸ್ತುತಿ ನೀಡಿವೆ.