ನವದೆಹಲಿ, ಮೇ. 22 (DaijiworldNews/TA): ಭಾರತದಲ್ಲಿ ಮಹಿಳೆಯರಿಗೆ ಅವಕಾಶಗಳು ಅತ್ಯಂತ ಸೀಮಿತವಾಗಿದ್ದ ಕಾಲದಲ್ಲಿ ಸಮಾಜದ ಎಲ್ಲಾ ಅಡೆತಡೆಗಳನ್ನು ಮೀರಿ ಇತಿಹಾಸ ನಿರ್ಮಿಸಿದ ಮಹಿಳೆ ಅನ್ನಾ ರಾಜಮ್ ಮಲ್ಹೋತ್ರಾ. ಭಾರತೀಯ ಆಡಳಿತ ಸೇವೆ (IAS) ಗೆ ಸೇರ್ಪಡೆಯಾದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ತಮ್ಮ ಧೈರ್ಯ, ದೃಢಸಂಕಲ್ಪ ಮತ್ತು ಸೇವಾಭಾವದಿಂದ ಮಹಿಳೆಯರಿಗೆ ಹೊಸ ದಿಕ್ಕು ತೋರಿಸಿದರು.

ಅನ್ನಾ ರಾಜಮ್ ಮಲ್ಹೋತ್ರಾ ಅವರು ಜುಲೈ 17, 1927ರಂದು ಕೇರಳದಲ್ಲಿ ಜನಿಸಿದರು. ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದ ಪ್ರಗತಿಪರ ಕುಟುಂಬದಲ್ಲಿ ಬೆಳೆದ ಅವರು ಬಾಲ್ಯದಲ್ಲೇ ದೊಡ್ಡ ಕನಸು ಕಾಣಲು ಪ್ರೇರೇಪಿತರಾದರು. ಅವರು ಪ್ರತಿಷ್ಠಿತಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದರು. ನಂತರ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿ 1951ರಲ್ಲಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದರು.
ಆ ಸಮಯದಲ್ಲಿ ಮಹಿಳೆಯರು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತರಲ್ಲ ಎಂಬ ಅಭಿಪ್ರಾಯ ಸಾಮಾನ್ಯವಾಗಿತ್ತು. ತರಬೇತಿ ಸಮಯದಲ್ಲೇ ಅವರಿಗೆ “ಮೃದು” ಸೇವೆಗಳಾದ ವಿದೇಶಾಂಗ ಅಥವಾ ಕೇಂದ್ರ ಸೇವೆ ಆಯ್ಕೆಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಅನ್ನಾ ಹಿಂದೆ ಸರಿಯಲಿಲ್ಲ. ಮಹಿಳೆಯರೂ ಕ್ಷೇತ್ರ ಮಟ್ಟದ ಆಡಳಿತ ನಿರ್ವಹಿಸಬಹುದು ಎಂಬುದನ್ನು ಸಾಬೀತುಪಡಿಸಲು ಅವರು ಕಠಿಣ ಹುದ್ದೆಗಳನ್ನು ಆಯ್ಕೆಮಾಡಿದರು. ತಮಿಳುನಾಡಿನಲ್ಲಿ ಸಬ್-ಕಲೆಕ್ಟರ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
“ನಾನು ಮಹಿಳೆ ಎಂಬ ಕಾರಣಕ್ಕೆ ಯಾವುದೇ ವಿಶೇಷ ಸೌಲಭ್ಯ ಬೇಡ. ಪುರುಷರಂತೆ ಸಮಾನ ಅವಕಾಶ ಬೇಕು,” ಎಂಬ ಅವರ ಮಾತುಗಳು ಇಂದಿಗೂ ಮಹಿಳೆಯರಿಗೆ ಪ್ರೇರಣೆಯಾಗಿದೆ. ಅನ್ನಾ ರಾಜಮ್ ಮಲ್ಹೋತ್ರಾ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
ಭಾರತದ ಅತಿ ದೊಡ್ಡ ಬಂದರುಗಳಲ್ಲಿ ಒಂದಾದ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಆಡಳಿತ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ದೂರದೃಷ್ಟಿ ಅವರನ್ನು ದೇಶದ ಅತ್ಯಂತ ಗೌರವಾನ್ವಿತ ಅಧಿಕಾರಿಗಳಲ್ಲಿ ಒಬ್ಬರನ್ನಾಗಿ ಮಾಡಿತು. ರಾಷ್ಟ್ರಕ್ಕೆ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ 1989ರಲ್ಲಿ ಅವರಿಗೆ ಭಾರತದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಲ್ಲೊಂದು ಆದ ಪದ್ಮಭೂಷಣ ಪ್ರದಾನಿಸಲಾಯಿತು.
ಅನ್ನಾ ರಾಜಮ್ ಮಲ್ಹೋತ್ರಾ ಕೇವಲ ಮೊದಲ ಮಹಿಳಾ ಐಎಎಸ್ ಅಧಿಕಾರಿ ಮಾತ್ರವಲ್ಲ, ಅವರು ಮಹಿಳೆಯರ ಆತ್ಮವಿಶ್ವಾಸಕ್ಕೆ ಪ್ರತೀಕವಾಗಿದ್ದರು. ಇಂದು ಸಾವಿರಾರು ಮಹಿಳೆಯರು ನಾಗರಿಕ ಸೇವೆಗಳಲ್ಲಿ ಸಾಧನೆ ಮಾಡಲು ಅವರ ಧೈರ್ಯ ಮತ್ತು ಹೋರಾಟವೇ ಸ್ಪೂರ್ತಿಯಾಗಿದೆ. 2018ರ ಸೆಪ್ಟೆಂಬರ್ 17ರಂದು 91ನೇ ವಯಸ್ಸಿನಲ್ಲಿ ಅವರು ನಿಧನರಾದರೂ, ಮಹಿಳಾ ಸಬಲೀಕರಣದ ಅವರ ಪರಂಪರೆ ಎಂದೆಂದಿಗೂ ಜೀವಂತವಾಗಿರುತ್ತದೆ.