ಬೆಂಗಳೂರು, ಮೇ. 21 (DaijiworldNews/TA): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು ಕಮಲಾನಗರ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್ನ ಜಿ.ಡಿ. ಪವಿತ್ರಾ ಅವರು ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಡಾ. ಕೆ. ಮನ್ಮಥ ರಾವ್ ಮತ್ತು ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿ, ರಾಜ್ಯ ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದರು. ಸರ್ಕಾರದಿಂದ ಆಕ್ಷೇಪಣೆ ಸಲ್ಲಿಸಲು ಸೂಚಿಸಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮುಂದೂಡಿದೆ.
2024ರ ಏಪ್ರಿಲ್ನಿಂದ 2025ರ ಜನವರಿವರೆಗೆ ಯಾವುದೇ ಅಡಚಣೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯ ಹಣ ವಿತರಣೆ ನಡೆಯುತ್ತಿತ್ತು. ಆದರೆ, ಫೆಬ್ರವರಿಯಿಂದ ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿದ್ದ ಯೋಜನೆ ವಿತರಣಾ ವ್ಯವಸ್ಥೆಯನ್ನು ತಾಲೂಕು ಪಂಚಾಯಿತಿಗಳ ಮೂಲಕ ನಿರ್ವಹಿಸಲು ಸರ್ಕಾರ ಹೊಸ ನೀತಿ ಜಾರಿಗೆ ತಂದಿತ್ತು. ಈ ತಾಂತ್ರಿಕ ಹಸ್ತಾಂತರದ ಗೊಂದಲದಿಂದ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ತಲುಪದೇ ಬಾಕಿ ಉಳಿದಿವೆ. ರಾಜ್ಯದ ಲಕ್ಷಾಂತರ ಮಹಿಳೆಯರು ಅವಲಂಬಿಸಿರುವ ಗೃಹಲಕ್ಷ್ಮಿ ಯೋಜನೆಯ ಹಣ ತಡವಾಗಿರುವುದರಿಂದ ಫಲಾನುಭವಿಗಳಲ್ಲಿ ಆತಂಕ ಹೆಚ್ಚಾಗಿದೆ. ಈಗ ಹೈಕೋರ್ಟ್ ಮಧ್ಯಪ್ರವೇಶದಿಂದ ಬಾಕಿ ಹಣ ಬಿಡುಗಡೆಗೆ ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.