ತಿರುವನಂತಪುರಂ, ಮೇ. 21 (DaijiworldNews/TA): ಕೇರಳ ವಿಧಾನಸಭೆಯ ನೂತನ ಅಧಿವೇಶನ ಗುರುವಾರ ಆರಂಭಗೊಂಡಿದ್ದು, ಹೊಸ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಗಮನಸೆಳೆಯಿತು. ಈ ವೇಳೆ ಕಾಸರಗೋಡು ಜಿಲ್ಲೆಯ ಗಡಿನಾಡು ಕ್ಷೇತ್ರವಾದ ಮಂಜೇಶ್ವರ ಕ್ಷೇತ್ರದ ಶಾಸಕ ಎ. ಕೆ. ಎಂ. ಅಶ್ರಫ್ ಅವರು ಕನ್ನಡ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು.

ಸದನದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಕನ್ನಡವನ್ನು ಬಳಸಿದ ಅಶ್ರಫ್ ಅವರು, ಗಡಿನಾಡಿನ ಕನ್ನಡಿಗರ ಭಾಷಾ ಪ್ರೀತಿ ಮತ್ತು ಅಸ್ಮಿತೆಯನ್ನು ಪ್ರತಿನಿಧಿಸಿದರು. ಕೇರಳ ರಾಜ್ಯದಲ್ಲಿದ್ದರೂ ಕಾಸರಗೋಡು ಮತ್ತು ಮಂಜೇಶ್ವರ ಭಾಗಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಇನ್ನೂ ಜೀವಂತವಾಗಿವೆ ಎಂಬ ಸಂದೇಶವನ್ನು ಅವರು ಸಾರಿದರು.
ಅವರ ಈ ನಡೆ ಗಡಿನಾಡ ಕನ್ನಡಿಗರಲ್ಲಿ ಸಂತಸ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕನ್ನಡದ ಮೇಲಿನ ಅಭಿಮಾನವನ್ನು ಕೇರಳ ವಿಧಾನಸಭೆಯಲ್ಲೇ ಪ್ರತಿಧ್ವನಿಸಿದ ಅಶ್ರಫ್ ಅವರ ಕ್ರಮವನ್ನು ಹಲವರು ಶ್ಲಾಘಿಸಿದ್ದಾರೆ.