ಬೆಂಗಳೂರು, ಮೇ. 19 (DaijiworldNews/TA): ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕರ್ನಾಟಕ ಇದೀಗ ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ರಾಜ್ಯಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ “ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು–2024” ವರದಿ ಆತಂಕಕಾರಿ ಚಿತ್ರಣವನ್ನು ಹೊರಹಾಕಿದೆ.

2024ರಲ್ಲಿ ದೇಶಾದ್ಯಂತ ಒಟ್ಟು 4,67,967 ರಸ್ತೆ ಅಪಘಾತಗಳು ಸಂಭವಿಸಿದ್ದು, 1,75,142 ಮಂದಿ ಮೃತಪಟ್ಟಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 500ಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ರಾಜ್ಯವಾರು ಪಟ್ಟಿಯಲ್ಲಿ ತಮಿಳುನಾಡು 67,526 ಅಪಘಾತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಮಧ್ಯಪ್ರದೇಶ (55,711) ಮತ್ತು ಕೇರಳ (46,591) ನಂತರದ ಸ್ಥಾನಗಳಲ್ಲಿವೆ. ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 43,062 ಅಪಘಾತಗಳು ಸಂಭವಿಸಿದ್ದು, 12,339 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ 52,591ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಕಳೆದ ಕೆಲವು ವರ್ಷಗಳಿಂದ ನಿರಂತರ ಏರಿಕೆಯಾಗುತ್ತಿದೆ. 2020ರಲ್ಲಿ 34,178 ಅಪಘಾತಗಳು ಮತ್ತು 9,760 ಸಾವುಗಳು ದಾಖಲಾಗಿದ್ದರೆ, 2023ರಲ್ಲಿ ಅಪಘಾತಗಳ ಸಂಖ್ಯೆ 43,440ಕ್ಕೆ ಏರಿಕೆಯಾಗಿದೆ. 2024ರಲ್ಲಿ ಅಪಘಾತಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದರೂ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ರಾಜ್ಯದಲ್ಲಿ ಸಂಭವಿಸುತ್ತಿರುವ ಭೀಕರ ಅಪಘಾತಗಳಿಗೆ ಅತಿವೇಗದ ಚಾಲನೆಯೇ ಪ್ರಮುಖ ಕಾರಣವಾಗಿದೆ. ಅತಿವೇಗದಿಂದಲೇ 10,614 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ. ದೇಶ ಮಟ್ಟದಲ್ಲಿ 61.2% ಅಪಘಾತಗಳಿಗೆ ಇದೇ ಕಾರಣವಾಗಿದೆ.
ಇದರ ಜೊತೆಗೆ ಅಜಾಗರೂಕ ಚಾಲನೆ, ಕುಡಿದು ವಾಹನ ಚಲಾಯಿಸುವುದು, ಮೊಬೈಲ್ ಬಳಕೆ ಮತ್ತು ರಾತ್ರಿ ಸಮಯದ ನಿರ್ಲಕ್ಷ್ಯ ಚಾಲನೆ ಕೂಡ ಅಪಘಾತಗಳಿಗೆ ಕಾರಣವಾಗಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲೇ ರಾಜ್ಯದಲ್ಲಿ 4,145 ಮಂದಿ ಮೃತಪಟ್ಟಿದ್ದು, ಎಕ್ಸ್ಪ್ರೆಸ್ವೇಗಳಲ್ಲಿ 108 ಮಂದಿ ಜೀವ ಕಳೆದುಕೊಂಡಿದ್ದಾರೆ.
ಎರಡು ಚಕ್ರದ ವಾಹನ ಸವಾರರು ಅಪಘಾತಗಳಲ್ಲಿ ಹೆಚ್ಚು ಬಲಿಯಾಗುತ್ತಿರುವ ವರ್ಗವಾಗಿದ್ದು, ದೇಶದ ಒಟ್ಟು ರಸ್ತೆ ಸಾವುಗಳಲ್ಲಿ 48.3% ಪಾಲು ಇವರದ್ದೇ ಆಗಿದೆ. ಕರ್ನಾಟಕದಲ್ಲೂ ಇದೇ ಪ್ರವೃತ್ತಿ ಮುಂದುವರಿದಿದೆ. 18ರಿಂದ 35 ವರ್ಷ ವಯಸ್ಸಿನ ಯುವಕರು, ಬೈಕ್ ಸವಾರರು ಮತ್ತು ಪಾದಚಾರಿಗಳು ಹೆಚ್ಚಾಗಿ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.
ಬೆಂಗಳೂರು ನಗರ ದೇಶದ ಅತ್ಯಂತ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದು, 4,769 ಅಪಘಾತಗಳು ದಾಖಲಾಗಿವೆ. ವಿಶೇಷವಾಗಿ ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗಳು ಅಪಾಯಕಾರಿ ಮಾರ್ಗಗಳಾಗಿ ಗುರುತಿಸಲ್ಪಟ್ಟಿವೆ.
ತಜ್ಞರ ಪ್ರಕಾರ ರಸ್ತೆ ಅಪಘಾತಗಳಿಂದ ದೇಶದ GDP ಯ 3ರಿಂದ 3.5% ನಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೇ 59.7% ಅಪಘಾತಗಳು ಸಂಭವಿಸುತ್ತಿರುವುದು ರಸ್ತೆ ಸುರಕ್ಷತೆ ಎಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತಿದೆ. ಅತಿವೇಗ, ನಿರ್ಲಕ್ಷ್ಯ ಮತ್ತು ನಿಯಮ ಉಲ್ಲಂಘನೆ ಮುಂದುವರಿದರೆ ರಸ್ತೆಗಳು ಇನ್ನಷ್ಟು ಅಪಾಯಕಾರಿ ಆಗುವ ಸಾಧ್ಯತೆ ಇದೆ. ಪ್ರತಿಯೊಬ್ಬ ವಾಹನ ಸವಾರರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜೀವದ ಮೌಲ್ಯವನ್ನು ಅರಿಯಬೇಕಾಗಿದೆ.