ನವದೆಹಲಿ, ಮೇ. 19 (DaijiworldNews/TA): ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಸ್ಕ್ವಾಡ್ರನ್ ಲೀಡರ್ ಸಾನ್ಯಾ ಹೊಸ ಮೈಲಿಗಲ್ಲು ನಿರ್ಮಿಸಿದ್ದು, ಕ್ಯಾಟ್-ಎ ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ (QFI) ಅರ್ಹತೆಯನ್ನು ಪಡೆದ ಮೊದಲ ಮಹಿಳಾ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ.

ಈ ಕುರಿತು ಭಾರತೀಯ ವಾಯುಪಡೆ ಸೋಮವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾನ್ಯಾ ಅವರ ಸಾಧನೆಯನ್ನು ಐಎಎಫ್ಗೆ ಹೆಮ್ಮೆಯ ಕ್ಷಣವೆಂದು ಬಣ್ಣಿಸಿದೆ. ಜೊತೆಗೆ ದೇಶದಾದ್ಯಂತದ ಮಹತ್ವಾಕಾಂಕ್ಷಿ ಮಹಿಳಾ ವಿಮಾನ ಚಾಲಕರಿಗೆ ಇದು ದೊಡ್ಡ ಸ್ಫೂರ್ತಿಯಾಗಿದೆ ಎಂದು ಹೇಳಿದೆ. ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಸಾನ್ಯಾ ಅವರನ್ನು ಸನ್ಮಾನಿಸುತ್ತಿರುವ ಚಿತ್ರಗಳನ್ನೂ ವಾಯುಪಡೆ ಹಂಚಿಕೊಂಡಿದೆ.
“ಶ್ರೇಷ್ಠತೆ ಹೊಸ ಎತ್ತರ ತಲುಪುತ್ತಿದೆ. ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರು ಪ್ರತಿಷ್ಠಿತ ಕ್ಯಾಟ್-ಎ ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಅರ್ಹತೆಯನ್ನು ಗಳಿಸಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಅವರ ಸಾಧನೆ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆಯ ಪ್ರತೀಕವಾಗಿದೆ,” ಎಂದು ಐಎಎಫ್ ಪೋಸ್ಟ್ನಲ್ಲಿ ತಿಳಿಸಿದೆ. ಈ ಐತಿಹಾಸಿಕ ಸಾಧನೆ ಭಾರತೀಯ ವಾಯುಪಡೆಯ ಮಹಿಳಾ ಅಧಿಕಾರಿಗಳ ಸಾಮರ್ಥ್ಯ ಮತ್ತು ಬೆಳೆಯುತ್ತಿರುವ ಪಾತ್ರವನ್ನು ಮತ್ತೊಮ್ಮೆ ದೇಶದ ಮುಂದಿಟ್ಟಿದೆ.