ಬಿಹಾರ, ಮೇ. 18 (DaijiworldNews/AA): ಯುಪಿಎಸ್ಸಿ ಪರೀಕ್ಷೆಯನ್ನು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 36ನೇ ರ್ಯಾಂಕ್ ಪಡೆದ ಡಾ. ದೀಪಾಲಿ ಮಹತೋ ಅವರ ಯಶೋಗಾಥೆ ಇದು.

ಡಾ. ದೀಪಾಲಿ ಮಹತೋ ಅವರು ಬಿಹಾರದ ಸಮಸ್ತಿಪುರ ಮೂಲದವರು. ಇವರು ದಿವಂಗತ ವೀರೇಂದ್ರ ಮಹತೋ ಅವರ ಮೊಮ್ಮಗಳು ಹಾಗೂ ಸಂಜಯ್ ಮಹತೋ ಮತ್ತು ಸುಲೇಖಾ ಮಹತೋ ದಂಪತಿಯ ಪುತ್ರಿಯಾಗಿದ್ದಾರೆ. ಡಾ. ದೀಪಾಲಿ ಅವರ ತಂದೆ ಸಂಜಯ್ ಮಹತೋ ಅವರು ಈ ಹಿಂದೆ ಆಡಳಿತ ಮತ್ತು ಪೊಲೀಸ್ ಸೇವೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ ಕಂದಾಯ ಸೇವೆಯಿಂದ ನಿವೃತ್ತರಾಗಿದ್ದಾರೆ.
ಡಾ. ದೀಪಾಲಿ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಮುಗಿಸಿದ ನಂತರ, ಮುಂಬೈನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಅಲ್ಲಿ ಅವರು ದಂತವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿ, ದಂತವೈದ್ಯರಾಗಿ ಕೆಲಸವನ್ನೂ ಮಾಡಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಕಂಡ ಹೊರತಾಗಿಯೂ ದೀಪಾಲಿ ಅವರು ಯುಪಿಎಸ್ಸಿ ಪರೀಕ್ಷೆ ಬರೆಯಬೇಕು, ನಾಗರಿಕ ಸೇವೆಗೆ ಸೇರಬೇಕೆಂಬ ಹಂಬಲ ಹೊಂದಿದ್ದರು. 2024ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 105ನೇ ರ್ಯಾಂಕ್ ಪಡೆದು ತರಬೇತಿ ಪಡೆಯುತ್ತಿದ್ದರು. ಆದರೆ 2025ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 36ನೇ ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.