ಚೆನ್ನೈ, ಮೇ. 17 (DaijiworldNews/AA): ನಟ ವಿಜಯ್ ಮುಖ್ಯಮಂತ್ರಿಯಾಗಿರುವುದು ನೋಡಿ ನನಗೆ ಅಸೂಯೆ ಇಲ್ಲ. ಏಕೆಂದ್ರೆ ನಾನು ರಾಜಕೀಯದಲ್ಲಿ ಇಲ್ಲ. ಅಂತಹ ಕೀಳು ಗುಣಮಟ್ಟದ ವ್ಯಕ್ತಿಯೂ ನಾನಲ್ಲ ಎಂದು ಹಿರಿಯ ನಟ ರಜನಿಕಾಂತ್ ತಮ್ಮ ವಿರುದ್ಧದ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸೋತ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರನ್ನ ರಜನಿಕಾಂತ್ ಭೇಟಿಯಾಗಿದ್ದರು. ಆ ಬಳಿಕ ರಜನಿಕಾಂತ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದೀಗ ಈ ಕುರಿತು ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದುಗೋಷ್ಠಿ ನಡೆಸಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
"ನಾನೇಕೆ ವಿಜಯ್ ಬಗ್ಗೆ ಅಸೂಯೆಪಡಬೇಕು? ಬಹುಶಃ ಕಮಲ್ ಹಾಸನ್ ಮುಖ್ಯಮಂತ್ರಿಯಾದರೆ, ನನಗೆ ಅಸೂಯೆಯಾಗಬಹುದು. ನಾನು ಟೀಕೆಗಳಿಗೆ ಪ್ರತಿಕ್ರಿಯಿಸದಿದ್ದರೆ, ಅವೆಲ್ಲವೂ ಸತ್ಯವೆಂದು ಒಪ್ಪಿಕೊಂಡಂತಾಗುತ್ತದೆ. ಚುನಾವಣಾ ಫಲಿತಾಂಶಗಳ ನಂತರ, ನಾನು ಹೋಗಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾದೆ. ನಾನು ಸ್ನೇಹಿತನಾಗಿಯೇ ಭೇಟಿಯಾದೆ, ಏಕೆಂದ್ರೆ ನಮ್ಮ ಸ್ನೇಹ ರಾಜಕೀಯವನ್ನೂ ಮೀರಿದ್ದು. ಆದರೆ ನಮ್ಮ ಭೇಟಿಯೇ ಟೀಕೆಗೆ ಗುರಿಯಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಕೊಳತ್ತೂರಿನಲ್ಲಿ ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಯಿತು. ಆದರೆ ವಿಜಯ್ ಸಿಎಂ ಆಗುವುದನ್ನ ನಿರಾಕರಿಸಿದ್ದೇನೆಂದು ತಪ್ಪಾಗಿ ಅರ್ಥೈಸಿದ್ದಾರೆ. ಈ ರಜನಿ ಬೇರೆ ಯಾವುದರ ಬಗ್ಗೆಯೂ ಅನಗತ್ಯವಾಗಿ ಮಾತನಾಡುವ ಕೀಳು ಮನಸ್ಸಿನ ಅಥವಾ ಕೀಳು ಮಟ್ಟದ ವ್ಯಕ್ತಿಯಲ್ಲ. ವಿಜಯ್ ಸಿಎಂ ಆಗಿದ್ದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ, ಆದ್ರೆ ಮೊದಲ ಚುನಾವಣೆಯಲ್ಲೇ ಸಿಎಂ ಆಗಿದ್ದು ಆಶ್ಚರ್ಯವಾಯಿತು. ಅವರು ಗೆದ್ದ ತಕ್ಷಣವೇ ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ" ಎಂದು ತಿಳಿಸಿದ್ದಾರೆ.