ಚೆನ್ನೈ,ಮೇ. 16 (DaijiworldNews/AK): ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿ. ಜೋಸೆಫ್ ವಿಜಯ್ ಅವರಿಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

ಮೇ 10 ರಂದು ಮುಖ್ಯಮಂತ್ರಿಗಳೊಂದಿಗೆ ಪ್ರಮಾಣ ಸ್ವೀಕರಿಸಿದ್ದ ಸಚಿವರುಗಳಿಗೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಖಾತೆಗಳ ಹಂಚಿಕೆಗೆ ಅನುಮೋದನೆ ನೀಡಿದ್ದು, ಈ ಕುರಿತು ಲೋಕ ಭವನದಿಂದ ಮೇ 16 ರಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ನೂತನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಆಡಳಿತದ ಮೇಲೆ ಬಿಗಿ ಹಿಡಿತ ಸಾಧಿಸಲು ಪ್ರಮುಖ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಗೃಹ, ಪೊಲೀಸ್, ನಗರ ಆಡಳಿತ, ಸಾರ್ವಜನಿಕ ಸೇರಿದಂತೆ ಪ್ರಮುಖ 16 ಖಾತೆ/ಇಲಾಖೆಗಳನ್ನ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಯಂತ್ರವನ್ನ ಬಲಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಪ್ರಮುಖ 16 ಖಾತೆಗಳನ್ನ ತಾವೇ ಇಟ್ಟುಕೊಂಡಿದ್ದಾರೆ. ಸಾರ್ವಜನಿಕ ಇಲಾಖೆ , ಸಾಮಾನ್ಯ ಆಡಳಿತ , ಭಾರತೀಯ ಆಡಳಿತ ಸೇವೆ , ಭಾರತೀಯ ಪೊಲೀಸ್ ಸೇವೆ, ಭಾರತೀಯ ಅರಣ್ಯ ಸೇವೆ (IFS), ಜಿಲ್ಲಾ ಕಂದಾಯ ಅಧಿಕಾರಿಗಳ ವಿಭಾಗ, ಪೊಲೀಸ್ , ಗೃಹ ಇಲಾಖೆ , ವಿಶೇಷ ಕಾರ್ಯಕ್ರಮ ಅನುಷ್ಠಾನ, ಮಹಿಳಾ ಕಲ್ಯಾಣ , ಯುವಜನ ಕಲ್ಯಾಣ (Youth Welfare), ಮಕ್ಕಳ ಕಲ್ಯಾಣ , ಹಿರಿಯ ನಾಗರಿಕರ ಕಲ್ಯಾಣ ವಿಕಲಚೇತನರ ಕಲ್ಯಾಣ , ಪೌರಾಡಳಿತ , ನಗರಾಭಿವೃದ್ಧಿ ಮತ್ತು ನೀರು ಸರಬರಾಜು ಹೀಗೆ ಒಟ್ಟು 16 ಖಾತೆಗಳನ್ನು ದಳಪತಿ ವಿಜಯ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಆದ್ರೆ, ಎಐಎಡಿಎಂಕೆ ಮಾಜಿ ನಾಯಕ ಅನುಭವಿಯೂ ಆಗಿರುವ ಕೆ.ಎ ಸೆಂಗೋಟ್ಟೈಯನ್ ಅವರಿಗೆ ಹಣಕಾಸು ಖಾತೆ ಹಂಚಿಕೆ ಮಾಡಿದ್ದಾರೆ.
ಎನ್. ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವ ಸ್ಥಾನ ನೀಡಲಾಗಿದ್ದು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಬಡತನ ನಿರ್ಮೂಲನೆ ಕಾರ್ಯಕ್ರಮಗಳು ಮತ್ತು ಸಣ್ಣ ನೀರಾವರಿ ಸೇರಿದಂತೆ ನೀರಾವರಿ ಯೋಜನೆಗಳ ಉಸ್ತುವಾರಿ ವಹಿಸಲಾಗಿದೆ.
ಆಧವ್ ಅರ್ಜುನ ಅವರು ಸಾರ್ವಜನಿಕ ಲೋಕೋಪಯೋಗಿ (PWD) ಮತ್ತು ಕ್ರೀಡಾಭಿವೃದ್ಧಿ ಸಚಿವರಾಗಿ ನೇಮಕಗೊಂಡಿದ್ದಾರೆ. ಕಟ್ಟಡಗಳು, ಹೆದ್ದಾರಿಗಳು, ಸಣ್ಣ ಬಂದರುಗಳು ಮತ್ತು ಕ್ರೀಡಾ ಪ್ರಗತಿಯ ಜವಾಬ್ದಾರಿ ಇವರ ಮೇಲಿದೆ. ಡಾ. ಕೆ.ಜಿ. ಅರುಣ್ರಾಜ್ ಇವರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಸ್ಥಾನದ ಜವಾಬ್ದಾರಿ ನೀಡಲಾಗಿದೆ. ಕೆ.ಎ. ಸೆಂಗೊಟ್ಟಿಯನ್ ಅವರಿಗೆ ಸಂಪುಟದ ಅತ್ಯಂತ ಹಿರಿಯ ಮತ್ತು ಪ್ರಮುಖ ಖಾತೆಯಾದ ಹಣಕಾಸು, ನಿವೃತ್ತಿ ವೇತನ ಮತ್ತು ಪೆನ್ಷನ್ ಭತ್ಯೆಗಳ ಸಚಿವರಾಗಿ ಇವರನ್ನು ನೇಮಿಸಲಾಗಿದೆ.ಆರ್ ನಿರ್ಮಲ್ ಕುಮಾರ್ ಅವರಿಗೆ ಇಂಧನ ಸಂಪನ್ಮೂಲ ಮತ್ತು ಕಾನೂನು ಸಚಿವ ಸ್ಥಾನವನ್ನು ನೀಡಲಾಗಿದ್ದು, ವಿದ್ಯುತ್ ಶಕ್ತಿ, ಕಾನೂನು, ನ್ಯಾಯಾಲಯಗಳು, ಜೈಲುಗಳು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಂತಹ ಪ್ರಮುಖ ವಿಭಾಗಗಳನ್ನು ಇವರು ನಿರ್ವಹಿಸಲಿದ್ದಾರೆ.
ಪಿ. ವೆಂಕಟರಾಮನ್ (ಆಹಾರ ಮತ್ತು ನಾಗರಿಕ ಸರಬರಾಜು), ರಾಜಮೋಹನ್ (ಶಾಲಾ ಶಿಕ್ಷಣ ಮತ್ತು ತಮಿಳು ಅಭಿವೃದ್ಧಿ), ಡಾ. ಟಿ.ಕೆ ಪ್ರಭು (ಖನಿಜ ಮತ್ತು ಗಣಿ) ಹಾಗೂ ಸೆಲ್ವಿ ಎಸ್. ಕೀರ್ತನಾ (ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ) ಇವರುಗಳಿಗೆ ಸಚಿವ ಸ್ಥಾನದ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.